ರೈಲ್ವೇ ಬಜೆಟ್: ರಾಜ್ಯಕ್ಕೆ ಸಹಸ್ರ ಕೋಟಿ ರೂ.

ಶನಿವಾರ, 4 ಜುಲೈ 2009 (12:19 IST)
ಶುಕ್ರವಾರ ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರ ರೈಲ್ವೇ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಸಿಕ್ಕಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ನೂತನ ಮಾರ್ಗಗಳಿಗಾಗಿ 202.58 ಕೋಟಿ, ಗೇಜ್ ಪರಿವರ್ತನೆಗೆ 98.06 ಕೋಟಿ, ಜೋಡಿ ಮಾರ್ಗಗಳಿಗೆ 231.24 ಕೋಟಿ, ವಿದ್ಯುದ್ದೀಕರಣಕ್ಕೆ 11.48 ಕೋಟಿ, ರೈಲ್ವೇ ಮೇಲ್ಸೇತುವೆ ಹಾಗೂ ಕೆಳಸೇತುವೆಗಳಿಗಾಗಿ 268.65 ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ಬಜೆಟ್‌ನಲ್ಲಿ ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಇದೀಗ ಬಜೆಟ್‌ನಲ್ಲಿ ರಾಜ್ಯಕ್ಕೆ ನೀಡಲಾಗಿರುವ ಮೊತ್ತವನ್ನು ಆದಷ್ಟು ಬೇಗ ಉಪಯೋಗ ಮಾಡಿಕೊಳ್ಳಬೇಕು. ಇದರಲ್ಲಿ ವಿಳಂಬತೆ ಎದುರಾಗಬಾರದು ಎಂಬ ಕಳಕಳಿಯನ್ನೂ ಸಚಿವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಕಳೆದ ಬಜೆಟ್‌ನಲ್ಲಿ ಲಾಲೂ ಪ್ರಸಾದ್ ಯಾದವ್ ರಾಜ್ಯಕ್ಕೆ 500 ಕೋಟಿ ರೂಪಾಯಿಗಳನ್ನು ನೀಡಿದ್ದರೂ 150 ಕೋಟಿಗೂ ಹೆಚ್ಚು ಹಣ ಬಳಕೆಯಾಗಿರಲಿಲ್ಲ ಎಂಬುದನ್ನು ಇದೇ ಸಂದರ್ಭದಲ್ಲಿ ಸಚಿವರು ಬಹಿರಂಗಪಡಿಸುತ್ತಾ, ಈ ಬಾರಿ ಹಾಗಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯೂ ಅವರಿಂದ ಬಂದಿದೆ.

ಬೆಂಗಳೂರು - ಮಂಗಳೂರು ನಡುವೆ ಹಗಲು ರೈಲು ಓಡಾಟವನ್ನು ನಿರ್ಲಕ್ಷಿಸಲಾಗಿದೆಯೇ ಎಂದು ಎದುರಾದ ಪ್ರಶ್ನೆಯೊಂದಕ್ಕೆ ಮುನಿಯಪ್ಪ, "ಇಲ್ಲ. ಅಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಶೀಘ್ರದಲ್ಲೇ ನಿವಾರಿಸಲಾಗುವುದು. ಈ ಸಂಬಂಧ ಸರಕು ಸಾಗಣೆ ರೈಲನ್ನು ಎರಡು ಗಂಟೆಗಳ ಕಾಲ ತಡೆ ಹಿಡಿಯಲೂ ಒಪ್ಪಿಗೆ ಬಂದಿದೆ. ಈ ರೈಲನ್ನು ಬಜೆಟ್‌ನಲ್ಲಿ ಪ್ರಕಟಿಸುವ ಅಗತ್ಯವಿಲ್ಲ. ಆದಷ್ಟು ಶೀಘ್ರದಲ್ಲಿ ಈ ರೈಲು ಓಡಲಿದೆ" ಎಂದರು.

ಬೆಂಗಳೂರು - ಮಂಗಳೂರು ರೈಲನ್ನು ಕಣ್ಣೂರಿಗೆ ವಿಸ್ತರಿಸಿರುವುದು ಮಂಗಳೂರಿನ ಜನತೆಗೆ ತೊಂದರೆಯಲ್ಲವೇ ಎಂಬುದಕ್ಕವರು, ಶೀಘ್ರದಲ್ಲೇ ಹಗಲು ರೈಲು ಆರಂಭವಾಗಲಿರುವುದರಿಂದ ಇಲ್ಲಿ ತೊಂದರೆಯ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಮಂಗಳೂರಿನ ಪ್ರಸಕ್ತ ರೈಲು ನಿಲ್ದಾಣದಲ್ಲಿ ಜಾಗದ ಅಭಾವವಿರುವಾಗ ವಿಶ್ವದರ್ಜೆಗೆ ಯಾವ ರೀತಿಯಲ್ಲಿ ಏರಿಸಲಾಗುತ್ತದೆ ಎಂಬ ಪ್ರಶ್ನೆಗೆ, "ಈಗಿರುವ ನಿಲ್ದಾಣವನ್ನೇ ಅಂತಾರಾಷ್ಟ್ರೀಯ ದರ್ಜೆಗೇರಿಸಬೇಕೆಂದೇನೂ ಇಲ್ಲ. ಅಗತ್ಯ ಬಿದ್ದರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಅದಕ್ಕೂ ಮೊದಲು ಸಮೀಕ್ಷೆ ನಡೆಸಬೇಕಿದೆ. ಮಂಗಳೂರು ಬಂದರು ಪ್ರದೇಶ ಅದಿರು ಸಾಗಾಟಕ್ಕೆ ಮಹತ್ವ ಪಡೆದುಕೊಂಡಿರುವ ಕಾರಣ ಇಲ್ಲಿ ವಿಶ್ವದರ್ಜೆಯ ನಿಲ್ದಾಣ ಅತ್ಯಗತ್ಯ" ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ