ಕೋವಿಡ್, ಡೆಂಗ್ಯೂ ಮತ್ತು ಮಲೇರಿಯಾ ರೋಗ ಲಕ್ಷಣಗಳ ನಡುವಿನ ವ್ಯತ್ಯಾಸ ತಿಳಿಯಿರಿ..
ಗುರುವಾರ, 26 ಆಗಸ್ಟ್ 2021 (15:02 IST)
ಒಂದೂವರೆ ವರ್ಷದ ಆಚೆಗೆ ನಮಗೆ ಜ್ವರ, ನೆಗಡಿ ಬಂದರೆ ಸ್ವಲ್ಪ ದಿನಗಳ ಕಾಲ ಮನೆಯಲ್ಲಿಯೇ ಮಾತ್ರೆಗಳನ್ನು ತೆಗೆದುಕೊಂಡು ಅಥವಾ ಮನೆಮದ್ದನ್ನು ತೆಗೆದುಕೊಂಡು ವಾಸಿ ಮಾಡಿಕೊಳ್ಳುತ್ತಿದ್ದೆವು. ಆದರೆ ಈ ಕೋವಿಡ್-19 ವೈರಸ್ ಹಾವಳಿ ಶುರುವಾದಾಗಿನಿಂದ ನೆಗಡಿ ಮತ್ತು ಜ್ವರ ಬಂದರೂ ತುಂಬಾ ಆತಂಕಕ್ಕೆ ಗುರಿಯಾಗುತ್ತಿದ್ದೇವೆ.
ಅದರಲ್ಲೂ ಈ ಮಳೆಗಾಲ ಶುರುವಾದ ಮೇಲೆ ನೆಗಡಿ, ಕೆಮ್ಮು ಸಾಮಾನ್ಯವಾಗಿರುತ್ತವೆ. ಎಷ್ಟೋ ಜನರು ತಮಗೆ ಬಂದಂತಹ ಸಾಮಾನ್ಯ ನೆಗಡಿ, ಕೆಮ್ಮು ಮತ್ತು ಜ್ವರವನ್ನು ಕೋವಿಡ್-19 ವೈರಸ್ ಗೆ ಸಂಬಂಧಿಸಿದ್ದು ಇರಬಹುದೆಂದು ಆತಂಕ ಪಡುವಂತೆ ಆಗಿದೆ. ಆದರೆ ಜನರು ಆತಂಕ ಪಡದೇ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಂಡರೆ ನಿಜವಾಗಿ ಯಾವ ರೋಗ ಆವರಿಸಿದೆ ಎಂದು ಮನದಟ್ಟಾಗುತ್ತದೆ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಮಲೇರಿಯಾ ಮತ್ತು ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಈಗ ಕೋವಿಡ್-19 ವೈರಸ್ ರೋಗ ಲಕ್ಷಣಗಳನ್ನು ತಿಳಿದುಕೊಂಡ ಜನರಿಗೆ ಸಾಮಾನ್ಯವಾಗಿ ಮಲೇರಿಯಾ ಮತ್ತು ಡೆಂಗ್ಯೂ ಬಂದರೂ ಅದು ಕೋವಿಡ್ ಇರಬಹುದೇ ಎಂದು ಆತಂಕ ಪಡುವಂತೆ ಮಾಡಿದೆ.
ಮಲೇರಿಯಾ ಮತ್ತು ಡೆಂಗ್ಯೂ ಸೊಳ್ಳೆ ಕಡಿತದಿಂದ ಹರಡುವ ರೋಗಗಳಾಗಿದ್ದು, ಕೋವಿಡ್-19 ವೈರಸ್ನಿಂದ ಹರಡುವ ರೋಗ. ಆದರೂ ಈ ಮೂರು ರೋಗಗಳ ಲಕ್ಷಣಗಳಲ್ಲಿ ಸಾಮ್ಯತೆ ಇರುವುದು ಜನರ ಆತಂಕಕ್ಕೆ ಕಾರಣವಾಗುತ್ತದೆ. ಆತಂಕ ಪಡುವ ಮುಂಚೆ ನೀವು ಈ ಮೂರು ರೋಗಗಳ ಲಕ್ಷಣಗಳ ವ್ಯತ್ಯಾಸವನ್ನು ತಿಳಿಯಿರಿ. ಕೋವಿಡ್-19,ಡೆಂಗ್ಯೂ ಮತ್ತು ಮಲೇರಿಯಾ ರೋಗಲಕ್ಷಣಗಳು ಹೀಗಿವೆ:
ಕೋವಿಡ್-19 ರೋಗದ ಲಕ್ಷಣಗಳು ಜ್ವರ, ಶೀತ, ಕೆಮ್ಮು, ನೆಗಡಿ, ಗಂಟಲು ನೋವು, ಉಸಿರಾಟದ ತೊಂದರೆ, ತಲೆನೋವು ಮತ್ತು ತೀವ್ರ ಆಯಾಸವಾಗಿದ್ದು, ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಂದರೂ ಈ ಲಕ್ಷಣಗಳು ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳಬಹುದು.
ಡೆಂಗ್ಯೂ ರೋಗ ಲಕ್ಷಣಗಳಲ್ಲಿ ನಿಮಗೆ ವಿಪರೀತ ಜ್ವರ, ತೀವ್ರ ತಲೆನೋವು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ವಾಕರಿಕೆ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ನಾಲ್ಕು ಡೆಂಗ್ಯೂ ವೈರಸ್ಗಳಿದ್ದು, ಒಬ್ಬ ವ್ಯಕ್ತಿಯು ನಾಲ್ಕು ಬಾರಿ ವೈರಸ್ನಿಂದ ಸೋಂಕಿಗೆ ಒಳಗಾಗಬಹುದು. ರೋಗವು ಹಾಗೆಯೇ ಮುಂದುವರೆದಂತೆ ವ್ಯಕ್ತಿಯ ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಾರೆ. ಮಲೇರಿಯಾ ರೋಗ ಲಕ್ಷಣಗಳಲ್ಲಿ ನಿಮಗೆ ಜ್ವರ, ತಲೆನೋವು ಮತ್ತು ಶೀತ ಕೂಡ ಇರುತ್ತವೆ. ರೋಗ ಬಂದ 24 ಗಂಟೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯದೆ ಹೋದರೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಈ ಮೂರು ರೋಗಗಳ ಲಕ್ಷಣಗಳಲ್ಲಿ ಹೇಗೆ ವ್ಯತ್ಯಾಸ ಕಾಣಬಹುದು:
ವಾಸನೆ ಬಾರದಿರುವುದು ಮತ್ತು ರುಚಿಯನ್ನು ಗುರುತಿಸಲು ಆಗದೆ ಇರುವುದು ಕೋವಿಡ್-19 ರೋಗದ ಸಂದರ್ಭದಲ್ಲಿ ಮಾತ್ರ.ಕೋವಿಡ್ ರೋಗದ ಪ್ರಾಥಮಿಕ ಲಕ್ಷಣಗಳಾದ ಕೆಮ್ಮು, ಧ್ವನಿಯಲ್ಲಿ ಬದಲಾವಣೆ, ಗಂಟಲಿನಲ್ಲಿ ಕಿರಿಕಿರಿ ಮತ್ತು ಉರಿಯೂತದ ಲಕ್ಷಣಗಳು ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಂದ ಸಂದರ್ಭದಲ್ಲಿ ಕಾಣಿಸುವುದಿಲ್ಲ.
ವಾಕರಿಕೆ ಮತ್ತು ಅತಿಸಾರದಂತಹ ಲಕ್ಷಣಗಳು ಕೋವಿಡ್ ರೋಗಿಗಳಲ್ಲಿ ಕಂಡು ಬರುವುದಿಲ್ಲ. ಉಸಿರಾಟದ ತೊಂದರೆ ಮತ್ತು ಎದೆ ನೋವು ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಂದಂತಹ ವ್ಯಕ್ತಿಯಲ್ಲಿ ಕಾಣಿಸುವುದಿಲ್ಲ. ಕೋವಿಡ್-19 ಎರಡು ಮೂರು ದಿನಗಳಲ್ಲಿ ರೋಗ ಲಕ್ಷಣಗಳನ್ನು ಕಾಣಬಹುದು, ಆದರೆ ಡೆಂಗ್ಯೂ ಮತ್ತು ಮಲೇರಿಯಾಗೆ ಸುಮಾರು 20ರಿಂದ 25 ದಿನಗಳವರೆಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.