ಫೀಸ್ ಕಟ್ಟಲು ಮೆಸೇಜ್, ಫೋನ್ ಮಾಡಿ ಪೋಷಕರಿಗೆ ಡಿಮ್ಯಾಂಡ್ ಮಾಡುತ್ತಿರುವ ಶಾಲೆಗಳು
ಗುರುವಾರ, 28 ಮೇ 2020 (09:31 IST)
ಬೆಂಗಳೂರು: ಕೊರೋನಾದಿಂದಾಗಿ ಈ ಸಾಲಿನ ಶೈಕ್ಷಣಿಕ ವರ್ಷ ಇನ್ನೂ ಆರಂಭವಾಗಿಲ್ಲ. ಯಾವಾಗ ಆರಂಭವಾಗುತ್ತದೆ ಎಂಬುದೇ ಗೊತ್ತಿಲ್ಲ. ಆದರೆ ಶಾಲೆಗಳು ಮಾತ್ರ ಪೋಷಕರಿಗೆ ಫೀಸ್ ಕಟ್ಟಲು ಒತ್ತಾಯ ಮಾಡುತ್ತಿವೆ.
ಸರ್ಕಾರ, ಶಿಕ್ಷಣ ಇಲಾಖೆ ಶಾಲಾ ಶುಲ್ಕ ಕಟ್ಟಲು ಒತ್ತಾಯ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರೂ ಹೆಚ್ಚಿನ ಶಾಲೆಗಳು ಮೆಸೇಜ್, ಫೋನ್ ಮೂಲಕ ಫೀಸ್ ಕಟ್ಟಲು ಒತ್ತಾಯಿಸುತ್ತಿವೆ. ಕೆಲವರು ನೇರವಾಗಿ ಒತ್ತಾಯ ಹೇರುತ್ತಿದ್ದರೆ, ಮತ್ತೆ ಕೆಲವು ಶಾಲೆಗಳು ಈಗಲೇ ಕಟ್ಟಲು ಆರಂಭಿಸಿದರೆ ನಿಮಗೆ ಆರ್ಥಿಕ ಹೊರೆಯಾಗದು ಎಂದೆಲ್ಲಾ ಪುಸಲಾಯಿಸಿ ಪರೋಕ್ಷ ಮಾರ್ಗದ ಮೂಲಕ ಒತ್ತಾಯ ಮಾಡುತ್ತಿವೆ.
ಹೇಗಿದ್ದರೂ ಶೈಕ್ಷಣಿಕ ವರ್ಷ ಆರಂಭವಾಗುವುದು ಆಗಸ್ಟ್ ಅಥವಾ ಸೆಪ್ಟೆಂಬರ್ ಆಗಬಹುದು. ಇದಕ್ಕೂ ಮೊದಲು ಆನ್ ಲೈನ್ ಕ್ಲಾಸ್ ಮಾಡುತ್ತೇವೆ. ಹಾಗಾಗಿ ಫೀಸ್ ಕಟ್ಟಿದರೆ ಉತ್ತಮ ಎಂದು ಪೋಷಕರಿಗೆ ಆಮಿಷವೊಡ್ಡುತ್ತಿವೆ. ಈ ವರ್ಷ ಪೂರ್ಣ ವರ್ಷ ತರಗತಿಯಿಲ್ಲದಿದ್ದರೂ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಕಡಿತ ಮಾಡುವ ಬಗ್ಗೆ ತುಟಿ ಪಿಟಕ್ ಅನ್ನುತ್ತಿಲ್ಲ. ಇನ್ನು ಕೆಲವು ಶಾಲೆಗಳಂತೂ ಸರ್ಕಾರದ ಎಚ್ಚರಿಕೆ ಮೀರಿ ಶುಲ್ಕ ಹೆಚ್ಚಿಸಿವೆ. ಈ ವ್ಯಾಪಾರೀಕರಣ ಗೊತ್ತಿದ್ದರೂ ಪೋಷಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಪರಿಸ್ಥಿತಿ ಎದುರಾಗಿದೆ.