ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಯುವ ತಂಡವು ಕಡಿಮೆ ಶ್ರೇಯಾಂಕದ ಜಿಂಬಾಬ್ವೆ ವಿರುದ್ಧ ಮೂರು ಪಂದ್ಯಗಳ ಸರಣಿಯ ಮೊದಲ ಏಕ ದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಶನಿವಾರ ಆಡಲಿದ್ದು, ಭಾರತ ಫೇವರಿಟ್ ಎನಿಸಿಕೊಂಡಿದೆ. ಆದರೆ ಜಯಕ್ಕಿಂತ ಹೆಚ್ಚಾಗಿ ಈ ಪ್ರವಾಸವು ಭಾರತದ ಭವಿಷ್ಯದ ಭರವಸೆಯ ಆಟಗಾರರನ್ನು ಗುರುತಿಸುತ್ತದೆಂದು ನಿರೀಕ್ಷಿಸಲಾಗಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಅಶ್ವನ್ ಮುಂತಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಎರಡನೇ ಆಯ್ಕೆಯ ತಂಡವನ್ನು ಮುನ್ನಡೆಸುವಲ್ಲಿ ಧೋನಿ ಸವಾಲು ಎದುರಿಸಿದ್ದಾರೆ. ಸುರೇಶ್ ರೈನಾ ಮತ್ತು ರಹಾನೆ ಜಿಂಬಾಬ್ವೆಯಲ್ಲಿ ಭಾರತದ ಪ್ರಾಯೋಗಿಕ ಸೀಮಿತ ಓವರುಗಳ ತಂಡಕ್ಕೆ ನಾಯಕತ್ವ ವಹಿಸಿದ್ದರು. ಆದರೆ ಜಿಂಬಾಬ್ವೆಯಲ್ಲಿ ಧೋನಿ ನಾಯಕರಾಗಿ ಇದೇ ಮೊದಲ ಬಾರಿಗೆ ಆಡುತ್ತಿರುವುದು.
ಇದೊಂದು ಭಿನ್ನ ಅನುಭವವಾಗಲಿದೆ. ದ್ವಿಪಕ್ಷೀಯ ಸರಣಿಯಲ್ಲಿ ಕೆಲವು ಆಟಗಾರರ ಜತೆ ಮೊದಲ ಬಾರಿ ಆಡುತ್ತಿದ್ದೇನೆ ಎಂದು ಜಿಂಬಾಬ್ವೆಗೆ ನಿರ್ಗಮಿಸುವ ಮುಂಚೆ ಧೋನಿ ಹೇಳಿದ್ದರು. ಅವರ ಬಲಗಳೇನು ಎನ್ನುವುದನ್ನು ಶೀಘ್ರದಲ್ಲೇ ಅಂದಾಜು ಮಾಡಿ ತಂಡದ ರಚನೆ ಆಧರಿಸಿ, ಆಟಗಾರರನ್ನು ಹೇಗೆ ಬಳಸಿಕೊಳ್ಳಬಹುದೆಂದು ಯೋಚಿಸುತ್ತೇನೆ. ತಂಡದ ಸಂಯೋಜನೆ ಚೆನ್ನಾಗಿ ಕಾಣುತ್ತಿದೆ ಎಂದು ಧೋನಿ ಪ್ರತಿಕ್ರಿಯಿಸಿದ್ದರು.