ವಿರಾಟ್ ಕೊಹ್ಲಿ ಅಮೋಘ 143: ಭಾರತ 4ಕ್ಕೆ 302 ಸವಾಲಿನ ಮೊತ್ತ(ವಿಡಿಯೊ)

ಶುಕ್ರವಾರ, 22 ಜುಲೈ 2016 (10:09 IST)
ವಿರಾಟ್ ಕೊಹ್ಲಿ ಅವರ ಮನೋಜ್ಞ ಶತಕದ ನೆರವಿನಿಂದ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಆರಂಭದ ದಿನವಾದ ಗುರುವಾರ 4 ವಿಕೆಟ್‌ಗೆ 302 ರನ್ ಸ್ಕೋರ್ ಮಾಡುವ ಮೂಲಕ ಸವಾಲಿನ ಮೊತ್ತವನ್ನು ಹಾಕುವತ್ತ ದಾಪುಗಾಲಿರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡ ಭಾರತದ ನಾಯಕ ಕೊಹ್ಲಿ ಅವರು 197 ಎಸೆತಗಳಲ್ಲಿ 16 ಬೌಂಡರಿಗಳೊಂದಿಗೆ 143 ರನ್ ಗಳಿಸಿ ಅಜೇಯರಾಗಿ ಉಳಿದರು.

ಅವರು ಶಿಖರ್ ಧವನ್ ಜತೆ ಮೂರನೇ ವಿಕೆಟ್‌ಗೆ 105 ರನ್ ಕಲೆಹಾಕಿದರು. ಧವನ್ ಟೀ ವಿರಾಮದ ವೇಳೆಯಲ್ಲಿ ದೇವೇಂದ್ರ ಬಿಶೂ ಅವರಿಗೆ 84 ರನ್‌ಗಳಿಗೆ ಎಲ್‌ಬಿಡಬ್ಲ್ಯುಗೆ ಔಟಾಗುವ ಮೂಲಕ ಶತಕದ ಅವಕಾಶ ತಪ್ಪಿಸಿಕೊಂಡರು.
 
 ಬಿಶೂ ಅವರ ಲೆಗ್ ಬ್ರೇಕ್‌ಗಳು ಮತ್ತು ಗೂಗ್ಲಿಗಳ ಮಿಶ್ರಣವು ಭಾರತೀಯ ಆಟಗಾರರಿಗೆ ತಲೆನೋವಾಗಿತ್ತು. ಬಿಶೂ ಧವನ್, ಚೇತೇಶ್ವರ್ ಪೂಜಾರ್ , ರಹಾನೆ ಅವರ ವಿಕೆಟ್‌ಗಳನ್ನು ಕಬಳಿಸಿದರು. 
 
 ಆಟ ಆರಂಭವಾದ ಅರ್ಧ ಗಂಟೆಯಲ್ಲೇ ಗೇಬ್ರಿಯನ್ ಬೌಲಿಂಗ್‌ನಲ್ಲಿ ಮುರಳಿ ವಿಜಯ್ ಬ್ರಾತ್‌ವೇಟ್ ಅವರಿಗೆ ಕ್ಯಾಚಿತ್ತು ಔಟಾದರು. ಪೂಜಾರಾ 16 ರನ್ ಗಳಿಸಿ ನಿರ್ಗಮಿಸಿದ ಬಳಿಕ ಕೊಹ್ಲಿ ಮನೋಜ್ಞ ಬ್ಯಾಟಿಂಗ್ ಮೂಲಕ ಶಿಖರ್ ಧವನ್ ಜತೆ ಇನ್ನಿಂಗ್ಸ್ ಕಟ್ಟಿದರು.
 
ಕೊಹ್ಲಿ ತಮ್ಮ ವೃತ್ತಿಜೀವನದ 3000 ಟೆಸ್ಟ್ ರನ್ ಪೂರೈಸಿದರು ಮತ್ತು ಟೆಸ್ಟ್ ನಾಯಕರಾಗಿ 1000 ರನ್ ಗಡಿಯನ್ನು ದಾಟಿದರು. ಧವನ್ ಜತೆ ಕೊಹ್ಲಿ ಶತಕದ ಜತೆಯಾಟವಾಡಿದರು ಮತ್ತು ರಹಾನೆ ಜತೆ 60 ರನ್ ಕಲೆಹಾಕಿದರು. ರಹಾನೆ ಬಿಶೂ ಬೌಲಿಂಗ್‌ನಲ್ಲಿ ಬ್ರೇವೊಗೆ ಕ್ಯಾಚಿತ್ತು ಔಟಾದರು. ರಹಾನೆ ಔಟಾದ ಬಳಿಕ ಕೊಹ್ಲಿ ಅಶ್ವಿನ್ ಜತೆ 66 ರನ್ ಕಲೆಹಾಕಿದರು.
 
 ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳಿಂದ ತಂಡವನ್ನು ತುಂಬಿದ್ದರೆ, ಭಾರತ ಮೂರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರುಗಳ ನೆರವಿನಿಂದ ಬೌಲಿಂಗ್ ದಾಳಿಗೆ ಉದ್ದೇಶಿಸಿದ್ದು, ರವೀಂದ್ರ ಜಡೇಜಾ ಬದಲಿಗೆ ಅಮಿತ್ ಮಿಶ್ರಾ ಅವರನ್ನು ಕರೆತಂದಿದ್ದಾರೆ. ವೆಸ್ಟ್ ಇಂಡೀಸ್ ಕಳೆದ 14 ವರ್ಷಗಳಿಂದ ಭಾರತವನ್ನು ಸೋಲಿಸಿಲ್ಲವಾದ್ದರಿಂದ ಈ ಸರಣಿಯಲ್ಲಿ ಭಾರತಕ್ಕಿಂತ ದುರ್ಬಲ ತಂಡವನೆಂದು ಪರಿಗಣಿಸಲಾಗಿದೆ.
 ಬ್ಯಾಟಿಂಗ್ ವಿವರ 
ಭಾರತ ಮೊದಲ ಇನ್ನಿಂಗ್ಸ್, 4 ವಿಕೆಟ್‌ಗೆ 302
ಮುರಳಿ ವಿಜಯ್ 7 ರನ್, ಶಿಖರ್ ಧವನ್ 84 ರನ್, ಚೇತೇಶ್ವರ್ ಪೂಜಾರ್ 16 ರನ್, ವಿರಾಟ್ ಕೊಹ್ಲಿ  ಅಜೇಯ 143, ರವಿಚಂದ್ರನ್ ಅಶ್ವಿನ್ ಅಜೇಯ 22
 ವಿಕೆಟ್ ಪತನ
14-1 (ಮುರಳಿ ವಿಜಯ್, 6.2), 74-2 (ಚೇತೇಶ್ವರ್ ಪೂಜಾರಾ 27.4), 179-3 (ಶಿಖರ್ ಧವನ್ 54.5), 236-4 (ಅಜಿಂಕ್ಯಾ ರಹಾನೆ, 67.2)
 ಬೌಲಿಂಗ್ ವಿವರ
ಗ್ಯಾಬ್ರಿಯನ್  13 ಓವರ್ 43 ರನ್ 1 ವಿಕೆಟ್,  ದೇವೇಂದ್ರ ಬಿಶೂ 27 ಓವರ್ 108 ರನ್  3 ವಿಕೆಟ್

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

 
 

ವೆಬ್ದುನಿಯಾವನ್ನು ಓದಿ