ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

Sampriya

ಬುಧವಾರ, 9 ಜುಲೈ 2025 (19:50 IST)
Photo Credit X
ದುಬೈ: ಇಂಗ್ಲೆಂಡ್‌ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಒಂದು ದ್ವಿಶತಕ ಮತ್ತು ಎರಡು ಶತಕ ಸಿಡಿಸಿದ ಭಾರತ ತಂಡದ ನಾಯಕ ನಾಯಕ ಶುಭಮನ್‌ ಗಿಲ್‌ ಅವರಿಗೆ ಐಸಿಸಿ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ ದೊರಕಿದೆ.

25 ವರ್ಷ ವಯಸ್ಸಿನ ಗಿಲ್‌ ಟೆಸ್ಟ್‌ ಮಾದರಿಯ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ಅಗ್ರ ಹತ್ತರಲ್ಲಿ ಸ್ಥಾನ  ಪಡೆದಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 269 ರನ್‌ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 161 ರನ್‌ ಗಳಿಸಿದ್ದರು. 

ಪಂದ್ಯವೊಂದರಲ್ಲಿ ಎರಡು ಬಾರಿ 150ಕ್ಕಿಂತ ಹೆಚ್ಚು ರನ್‌ ಗಳಿಸಿದ ವಿಶ್ವದ ಎರಡನೇ ಬ್ಯಾಟರ್‌ ಎನಿಸಿಕೊಂಡರು. ಈ ಟೂರ್ನಿಯಲ್ಲಿ 2 ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಗಿಲ್‌, ಈವರೆಗೆ ಬರೋಬ್ಬರಿ 585 ರನ್‌ ಬಾರಿಸಿದ್ದಾರೆ. ಭಾರತ ತಂಡವು 336 ರನ್ ಜಯಿಸಿ, ಸರಣಿಯಲ್ಲಿ 1–1 ಸಮಬಲ ಸಾಧಿಸಲು ನೆರವಾದರು.

ಇಂಗ್ಲೆಂಡ್‌ ವಿರುದ್ಧ ಸರಣಿಗೂ ಮುನ್ನ 23ನೇ ಸ್ಥಾನದಲ್ಲಿದ್ದ ಗಿಲ್‌ ‌ಅವರು 15 ಸ್ಥಾನಗಳ ಬಡ್ತಿ ಪಡೆದು 807 ಪಾಯಿಂಟ್ಸ್‌ಗಳೊಂಗೆ ಆರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2023ರ ಸೆಪ್ಪೆಂಬರ್‌ನಲ್ಲಿ 14ನೇ ಸ್ಥಾನಕ್ಕೇರಿದ್ದು, ಈ ಹಿಂದಿನ ಅತ್ಯುತ್ತಮ ರ‍್ಯಾಂಕ್‌ ಆಗಿತ್ತು.

ಭಾರತದ ಬ್ಯಾಟರ್‌ಗಳ ಪೈಕಿ ಯಶಸ್ವಿ ಜೈಸ್ವಾಲ್‌ (858 ಪಾಯಿಂಟ್‌) ನಾಲ್ಕನೇ ಹಾಗೂ ರಿಷಭ್‌ ಪಂತ್‌ (790)  ಎಂಟನೇ ಸ್ಥಾನದೊಂದಿಗೆ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ.  ಇಂಗ್ಲೆಂಡ್‌ನವರಾದ ಹ್ಯಾರಿ ಬ್ರೂಕ್‌ (886 ಪಾಯಿಂಟ್‌), ಜೋ ರೂಟ್‌ (868 ಪಾಯಿಂಟ್‌) ಹಾಗೂ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ (867 ಪಾಯಿಂಟ್‌) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇದ್ದಾರೆ.

ತಂಡಗಳ ಲಿಸ್ಟ್‌ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಮತ್ತು ಭಾರತ ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿ ಇವೆ.

ಬೌಲರ್‌ಗಳ ವಿಭಾಗದಲ್ಲಿ ಜಸ್‌ಪ್ರೀತ್‌ ಬೂಮ್ರಾ (898 ಪಾಯಿಂಟ್‌) ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಕಾರ್ಯಭಾರದ ಭಾಗವಾಗಿ ಅವರು ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ಆಡದಿದ್ದರೂ ಅಗ್ರಸ್ಥಾನಕ್ಕೆ ಚ್ಯುತಿಬಂದಿಲ್ಲ. ರವೀಂದ್ರ ಜಡೇಜ ಅವರು ಆಲ್‌ರೌಂಡರ್‌ಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ