IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

Krishnaveni K

ಗುರುವಾರ, 10 ಜುಲೈ 2025 (08:39 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಮೂರನೇ ಟೆಸ್ಟ್ ಪಂದ್ಯ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಲಿದೆ. ವೇಗದ ಪಿಚ್ ನಿರ್ಮಿಸಿ ಬೆದರಿಸಲು ಮುಂದಾದ ಇಂಗ್ಲೆಂಡ್ ಗೆ ಟೀಂ ಇಂಡಿಯಾ ವೇಗದ ಬೌಲಿಂಗ್ ಮೂಲಕವೇ ಠಕ್ಕರ್ ನೀಡಲು ಮುಂದಾಗಿದೆ.

ಮೊದಲ ಪಂದ್ಯ ಸೋತು, ಕಳೆದ ಪಂದ್ಯ ಗೆದ್ದಿರುವ ಟೀಂ ಇಂಡಿಯಾಗೆ ಈಗ ಲಾರ್ಡ್ಸ್ ನಲ್ಲಿ ಗೆದ್ದು ಇತಿಹಾಸ ನಿರ್ಮಿಸುವ ಕನಸಿದೆ. ಇದುವರೆಗೆ ಲಾರ್ಡ್ಸ್ ಮೈದಾನದಲ್ಲಿ ಭಾರತ ಗೆದ್ದಿದ್ದು ಕೇವಲ ಮೂರೇ ಬಾರಿ. ಈ ಮೈದಾನ ಭಾರತದ ಪಾಲಿಗೆ ಅದೃಷ್ಟಹೀನ ಮೈದಾನ. ಆದರೆ ಹಳೆಯ ದಾಖಲೆಗಳೇನಿದ್ದರೂ ಇತಿಹಾಸ. ನಾವೀಗ ಹೊಸ ಮೈಲಿಗಲ್ಲು ನೆಡಲು ತಯಾರಿದ್ದೇವೆ ಎನ್ನುತ್ತಿದೆ ಶುಭಮನ್ ಗಿಲ್ ಬಳಗ.

ಭಾರತ ತಂಡದಲ್ಲಿ ಈ ಪಂದ್ಯಕ್ಕೆ ಕೆಲವು ಬದಲಾವಣೆ ಖಚಿತವಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ ತಂಡಕ್ಕೆ ವಾಪಸ್ ಆಗಿರುವುದು ತಂಡಕ್ಕೆ ಆನೆಬಲ ಒದಗಿಸಲಿದೆ. ಅವರಿಗಾಗಿ ಪ್ರಸಿದ್ಧ ಕೃಷ್ಣ ಸ್ಥಾನ ತ್ಯಾಗ ಮಾಡಬೇಕಾದೀತು. ಉಳಿದಂತೆ ಬ್ಯಾಟಿಂಗ್ ನಲ್ಲಿ ಹೆಚ್ಚಿನ ಬದಲಾವಣೆಯಾಗದು.

ಇತ್ತ ಇಂಗ್ಲೆಂಡ್ ನಲ್ಲೂ ವೇಗಿ ಜೋಫ್ರಾ ಆರ್ಚರ್ ತಂಡಕ್ಕೆ ವಾಪಸ್ ಆಗುತ್ತಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಬ್ಯಾಟಿಗರಿಗೆ ಕಡಿವಾಣ ಹಾಕುವಲ್ಲಿ ಇಂಗ್ಲೆಂಡ್ ವೇಗಿಗಳು ಎಡವಿದ್ದರು. ಹೀಗಾಗಿ ಜೋಫ್ರಾ ಸೇರ್ಪಡೆ ತಂಡಕ್ಕೆ ಹೊಸ ಬಲ ಬರಬಹುದು. ಉಳಿದಂತೆ ಹೆಚ್ಚಿನ ಬದಲಾವಣೆ ಇರದು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ