ದಂಬುಲಾ: ಮಹಿಳೆಯರ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು 7 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಭಾರತ ವನಿತಾ ತಂಡ ಹೊಸ ಸಾಧನೆ ಮಾಡಿದೆ.
ಕಳೆದ ಒಂದು ತಿಂಗಳಿನಲ್ಲಿ ಭಾರತದ ವಿವಿಧ ತಂಡ ಬೇರೆ ಬೇರೆ ಟೂರ್ನಿಗಳಲ್ಲಿ ಮೂರನೇ ಬಾರಿಗೆ ಪಾಕಿಸ್ತಾನಕ್ಕೆ ಸೋಲುಣಿಸಿದಂತಾಗಿದೆ. ಇದೇ ತಿಂಗಳ ಆರಂಭದಲ್ಲಿ ಪಾಕಿಸ್ತಾನ ತಂಡ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಸೋತಿತ್ತು. ಅದಾದ ಬಳಿಕ ಕಳೆದ ವಾರವಷ್ಟೇ ಹಿರಿಯರ ತಂಡ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಇದೀಗ ಮೂರನೇ ಬಾರಿಗೆ ಮಹಿಳಾ ತಂಡ ಪಾಕಿಸ್ತಾನದ ವನಿತೆಯರನ್ನು ಸೋಲಿಸಿದೆ.
ಏಷ್ಯಾ ಕಪ್ ಮಹಿಳೆಯರ ಟೂರ್ನಿ ನಿನ್ನೆ ಆರಂಭವಾಗಿದ್ದು, ಭಾರತ ನಿನ್ನೆ ಎರಡನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 108 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಭಾರತಕ್ಕೆ ಸ್ಟಾರ್ ಬ್ಯಾಟಿಗರಾದ ಶಫಾಲಿ ವರ್ಮ-ಸ್ಮೃತಿ ಮಂದಾನಾ ಜೋಡಿ ಭರ್ಜರಿ ಆರಂಭ ನೀಡಿದರು. ಸ್ಮೃತಿ 45, ಶಫಾಲಿ 40 ರನ್ ಸಿಡಿಸಿ ತಂಡದ ಗೆಲುವು ಸುಲಭವಾಗಿಸಿದರು.
ಅದ್ಭುತ ಫಾರ್ಮ್ ನಲ್ಲಿರುವ ಮಂದಾನಾ ನಿನ್ನೆಯ ಆಟ ಕೂಡಾ ಮನಮೋಹಕವಾಗಿತ್ತು. ಇದುವರೆಗೆ ನಡೆದ 9 ಮಹಿಳಾ ಏಷ್ಯಾ ಕಪ್ ಪೈಕಿ ಭಾರತ 7 ಬಾರಿ ಚಾಂಪಿಯನ್ ಆಗಿದೆ. ಭಾರತದ ಈಗಿನ ಫಾರ್ಮ್ ಗಮನಿಸಿದರೆ ಈ ಬಾರಿಯೂ ಭಾರತವೇ ಗೆಲ್ಲುವ ಫೇವರಿಟ್ ತಂಡವೆನಿಸಿಕೊಂಡಿದೆ.