ಆಕಾಶ್‌ ದೀಪ್‌ ಬೆಂಕಿ ದಾಳಿಗೆ ಇಂಗ್ಲೆಂಡ್ ತತ್ತರ: ಶುಭಮನ್‌ ಗಿಲ್‌ ಬಗಳಕ್ಕೆ ದಾಖಲೆಯ 336 ರನ್‌ಗಳ ಭರ್ಜರಿ ಜಯ

Sampriya

ಭಾನುವಾರ, 6 ಜುಲೈ 2025 (22:02 IST)
Photo Credit X
ಲಂಡನ್‌: ವೇಗಿ ಆಕಾಶ್‌ ದೀಪ್‌ ಅವರ ಬೆಂಕಿ ದಾಳಿಯ ನೆರವಿನಿಂದ ಭಾರತ ತಂಡವು ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯವನ್ನು ದಾಖಲೆಯ 336 ರನ್‌ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ 608 ರನ್‌ಗಳ ಗುರಿಯನ್ನು ಪಡೆದ ಇಂಗ್ಲೆಂಡ್‌ 5ನೇ ದಿನದಾಟದಲ್ಲಿ ಒಟ್ಟು 68.1 ಓವರ್‌ಗಳಲ್ಲಿ 271 ರನ್‌ಗಳಿಸಿ ಆಲೌಟ್‌ ಆಯಿತು. 336 ರನ್‌ಗಳ ಜಯವು ಭಾರತಕ್ಕೆ ವಿದೇಶದಲ್ಲಿ ಸಿಕ್ಕಿದ ದೊಡ್ಡ ಜಯದ ದಾಖಲೆಯಾಗಿದೆ.

4ನೇ ದಿನದ ಅಂತ್ಯದಲ್ಲಿ 3 ವಿಕೆಟ್‌ ನಷ್ಟಕ್ಕೆ 72 ರನ್‌ಗಳಿಸಿದ್ದ ಇಂಗ್ಲೆಂಡ್‌ ಇಂದು 7 ವಿಕೆಟ್‌ ಸಹಾಯದಿಂದ ಒಟ್ಟು 199 ರನ್‌ ಗಳಿಸಿತು. ಇಂದು ಬೆನ್‌ ಸ್ಟೋಕ್‌ ಮತ್ತು ಜೇಮಿ ಸ್ಮಿತ್‌ 70 ರನ್‌ ಜೊತೆಯಾಟವಾಡಿದರು. ಬೆನ್‌ಸ್ಟೋಕ್‌ 33 ರನ್‌ ಗಳಿಸಿ ಔಟಾದರೆ ಸ್ಮಿತ್‌ 88 ರನ್‌ ಹೊಡೆದು ಔಟಾದರು. 

ಭಾರತದ ಪರ ಆಕಾಶ್‌ ದೀಪ್‌ ಮೊದಲ ಬಾರಿಗೆ 6 ವಿಕೆಟ್‌ ಕಿತ್ತರು. ಮೊಹಮ್ಮದ್‌ ಸಿರಾಜ್‌, ಪ್ರಸಿದ್ದ್‌ ಕೃಷ್ಣ, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯವನ್ನು ಗೆದ್ದ ಬೆನ್ನಲ್ಲೇ ಭಾರತ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿದಿದೆ. 2025-27ರ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಮೊದಲ ಪಂದ್ಯವನ್ನು ಸೋತ ಕಾರಣ ಭಾರತ 5ನೇ ಸ್ಥಾನ ಪಡೆದುಕೊಂಡಿತ್ತು. ಈಗ ಜಯ ಸಾಧಿಸಿದ್ದರಿಂದ 4ನೇ ಸ್ಥಾನಕ್ಕೆ ಏರಿದೆ. ಭಾರತದಷ್ಟೇ 12 ಅಕ, 50 ಪಿಸಿಟಿ ಪಡೆದಿರುವ ಇಂಗ್ಲೆಂಡ್‌ ಮೂರನೇ ಸ್ಥಾನದಲ್ಲಿದೆ.  ಒಂದು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ ಎರಡು ಪಂದ್ಯವಾಡಿ ಒಂದು ಜಯ, ಒಂದು ಡ್ರಾ ಸಾಧಿಸಿರುವ ಶ್ರೀಲಂಕಾ 16 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ