England-India Test: ರನ್‌ ಹೊಳೆ ಹರಿಸಿದ ಶುಭಮನ್‌ ಗಿಲ್‌ನನ್ನು ಮುಕ್ತ ಕಂಠದಿಂದ ಕೊಂಡಾಡಿದ ವಿರಾಟ್‌ ಕೊಹ್ಲಿ

Sampriya

ಭಾನುವಾರ, 6 ಜುಲೈ 2025 (13:30 IST)
Photo Credit X
ಲಂಡನ್‌: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ರನ್‌ ಹೊಳೆ ಹರಿಸಿರುವ ನಾಯಕ ಶುಭಮನ್ ಗಿಲ್ ಅವರನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕೊಂಡಾಡಿದ್ದಾರೆ. 

25 ವರ್ಷದ ಗಿಲ್ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ (269) ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಶತಕ (161) ರನ್‌ ಗಳಿಸುವ ಜೊತೆಗೆ ಪಂದ್ಯವೊಂದರಲ್ಲಿ 430 ರನ್ ಕಲೆಹಾಕಿದ್ದಾರೆ. ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತದ ಮೊದಲ ಮತ್ತು ವಿಶ್ವದ ಎರಡನೇ ಆಟಗಾರ ಎನಿಸಿದ್ದಾರೆ. 25 ವರ್ಷದ ಅವರು ಮೊದಲ ಟೆಸ್ಟ್‌ನಲ್ಲಿ 147 ರನ್ ಗಳಿಸಿದ್ದರು. ಅವರು ಸರಣಿಯಲ್ಲಿ ದಾಖಲೆಯ 585 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ 4ನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಬ್ಯಾಟಿಂಗ್ ಮಾಡುತ್ತಿದ್ದು, ನಾಯಕನಾಗಿ ತಮ್ಮ ಮೊದಲ ಎರಡು ಟೆಸ್ಟ್‌ಗಳಲ್ಲಿ ಮೂರು ಶತಕಗಳನ್ನು ಗಳಿಸಿದ ಎರಡನೇ ನಾಯಕನಾಗಿ ಗಿಲ್ ವಿರಾಟ್ ಕೊಹ್ಲಿ ಅವರ ಸಾಲಿಗೆ ಸೇರಿದ್ದಾರೆ. 25 ವರ್ಷದ ಗಿಲ್ ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ನಿಯಮಿತವಾಗಿ ದಾಖಲೆಗಳನ್ನು ಮುರಿದಿದ್ದಾರೆ.

ಚೆನ್ನಾಗಿ ಆಡಿದೆ ಸ್ಟಾರ್ ಬಾಯ್. ಅಪರೂಪದ ದಾಖಲೆ ಬರೆಯುತ್ತಿರುವಿರಿ. ಇಲ್ಲಿಂದ ಮುಂದೆ ಮತ್ತು ಇನ್ನೂ ಹೆಚ್ಚಿನ ಎತ್ತರ ತಲುಪಿ. ನೀವು ಇದಕ್ಕೆಲ್ಲ ಅರ್ಹರು ಎಂದು ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಕೊಹ್ಲಿ ಅವರು, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ. ಈ ಮಧ್ಯೆ ಗಿಲ್ ಅವರ ದಾಖಲೆಯ ಬ್ಯಾಟಿಂಗ್ ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ