ಪಲ್ಲಿಕೆಲೆ: ಟೀಂ ಇಂಡಿಯಾಗೆ ಈಗ ಗೆಲುವು ಸಾಮಾನ್ಯವಾಗಿದೆ. ಆದರೆ ಇದು ಮಾತ್ರ ಅಷ್ಟು ಸುಲಭ ಜಯವಾಗಿರಲಿಲ್ಲ. ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯವನ್ನು 3 ವಿಕೆಟ್ ಗಳಿಂದ ಗೆಲ್ಲುವ ಮೂಲಕ ದ್ವೀಪ ರಾಷ್ಟ್ರದಲ್ಲಿ ತನ್ನ ಗೆಲುವಿನ ಸರಪಳಿ ಮುಂದುವರಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 237 ರನ್ ಗಳ ಗುರಿ ನಿಗದಿ ಪಡಿಸಿತ್ತು. ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ಪದ್ಧತಿ ಅಳವಡಿದಲಾಗಿತ್ತು. ಒಂದು ಹಂತದಲ್ಲಿ ಅಖಿಲ ಧನಂಜಯ ಬೌಲಿಂಗ್ ನಿಂದಾಗಿ ಸೋಲಿನ ಸುಳಿಗೆ ಸಿಲುಕಿದ್ದ ಭಾರತಕ್ಕೆ ಧೋನಿ ಮತ್ತು ಭುವನೇಶ್ವರ ಕುಮಾರ್ ಆಸರೆಯಾದದರು. ಕೊನೆಗೆ 44.2 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 231 ರನ್ ಗಳಿಸುವ ಮೂಲಕ ಗುರಿ ಮುಟ್ಟಿತು.
ಭರ್ಜರಿ ಫಾರ್ಮ್ ನಲ್ಲಿರುವ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಆಕರ್ಷಕ ಬ್ಯಾಟಿಂಗ್ ಮೂಲಕ ಮೊದಲ ವಿಕೆಟ್ ಗೆ ಶತಕದ ಜತೆಯಾಟ ನೀಡಿದರು. ಧವನ್ ಕೊಂಚ ನಿಧಾನಿಯಾಗಿದ್ದರೂ, ರೋಹಿತ್ ಅದ್ಭುತ ಲಹರಿಯಲ್ಲಿದ್ದರು ಹಾಗೂ ಬೀಡುಬೀಸಾಗಿ ಬ್ಯಾಟ್ ಬೀಸಿದರು. ಆದರೆ ಇವರಿಬ್ಬರು ಔಟಾದ ಬಳಿಕ ಭಾರತ ಇದ್ದಕ್ಕಿದ್ದಂತೆ ಕುಸಿತಕ್ಕೊಳಗಾಯಿತು.