ಮಹಿಳಾ ಟಿ20 ವಿಶ್ವಕಪ್: ವನಿತೆಯರ ಕನಸು ನುಚ್ಚುನೂರು

ಭಾನುವಾರ, 8 ಮಾರ್ಚ್ 2020 (17:25 IST)
ಸಿಡ್ನಿ: ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಭಾರತೀಯರ ಕನಸು ಮಹಿಳಾ ದಿನವೇ ನುಚ್ಚುನೂರಾಗಿದೆ. ಆಸ್ಟ್ರೇಲಿಯಾದ ಬೃಹತ್ ಮೊತ್ತವನ್ನು ಬೆನ್ನತ್ತಲಾಗದೇ ಭಾರತೀಯರು ಸೋಲೊಪ್ಪಿಕೊಂಡಿದ್ದಾರೆ.


ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಆರಂಭದಿಂದಲೇ ಭಾರತೀಯರ ಬೌಲಿಂಗ್ ನ್ನು ಸಂಪೂರ್ಣವಾಗಿ ಪುಡಿಗಟ್ಟಿತು. ಅದರಲ್ಲೂ ಅಲಿಸಾ ಹೀಲೇ 39 ಎಸೆತಗಳಿಂದ 75 ರನ್ ಸಿಡಿಸಿದರೆ ಬೆತ್ ಮೂನಿ 54 ಎಸೆತಗಳಿಂದ 78 ರನ್ ಚಚ್ಚಿದರು. ಇವರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆಸೀಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು.

ಈ ಮೊತ್ತವೇ ಭಾರತೀಯರ ಜಂಗಾಬಲ ಉಡುಗಿಸಿತ್ತು. ಇದುವರೆಗೆ ಟೂರ್ನಿಯುದ್ಧಕ್ಕೂ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ಶಫಾಲಿ ವರ್ಮ ಕೇವಲ 2 ರನ್ ಗೆ ವಿಕೆಟ್ ಒಪ್ಪಿಸಿದರೆ ಅವರ ಹಿಂದೆಯೇ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ ಮನ್ ಗಳು ಜುಜುಬಿ ಮೊತ್ತಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಇದ್ದವರಲ್ಲಿ ದೀಪ್ತಿ ಶರ್ಮ 33, ವೇದಾ ಕೃಷ್ಣಮೂರ್ತಿ 19 ಮತ್ತು ರಿಚಾ ಘೋಷ್ 18 ರನ್ ಗಳಿಸಿ ಕೊಂಚ ಪ್ರತಿರೋಧ ತೋರಿದರೂ ಬೃಹತ್ ಮೊತ್ತದೆದುರು ಇವರ ಆಟ ಯಾವುದಕ್ಕೂ ಸಾಲಲಿಲ್ಲ. ಕೊನೆಯದಾಗಿ ಭಾರತ 19.1 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಆಗುವ ಮೂಲಕ 85 ರನ್ ಗಳ ಸೋಲೊಪ್ಪಿಕೊಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ