ಓಲ್ಡ್ ಟ್ರಾಫರ್ಡ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ಇಂದು ಇಂಗ್ಲೆಂಡ್ ಮತ್ತೆ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಗಿಳಿಸಿತು. ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ಭಾರತ ವಿಕೆಟ್ ನಷ್ಟವಿಲ್ಲದೇ 52 ರನ್ ಗಳಿಸಿದೆ.
ಕೆಎಲ್ ರಾಹುಲ್ 32 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂದು 11 ರನ್ ಪೂರ್ತಿ ಮಾಡಿದೊಡನೆ ರಾಹುಲ್ ಇಂಗ್ಲೆಂಡ್ ನೆಲದಲ್ಲಿ ಹೊಸ ಇತಿಹಾಸ ಬರೆದರು. ಭಾರತದ ಪರ ಇಂಗ್ಲೆಂಡ್ ನಲ್ಲಿ ಟೆಸ್ಟ್ ಮಾದರಿಯಲ್ಲಿ 1000 ರನ್ ಪೂರೈಸಿದ ಐದನೇ ಆಟಗಾರ ಎನಿಸಿಕೊಂಡರು.
ಇದಕ್ಕೆ ಮೊದಲು ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ ಮಾತ್ರ ಈ ಸಾಧನೆ ಮಾಡಿದ್ದಾರೆ. ಇದೀಗ ರಾಹುಲ್ ಐದನೆಯವರಾಗಿ ಈ ವಿಶೇಷ ಪಟ್ಟಿಗೆ ಸೇರ್ಪಡೆಯಾದರು. ಅಲ್ಲದೆ ಈ ಸರಣಿಯಲ್ಲಿ ಅವರು 400 ರನ್ ಪೂರೈಸಿದರು.