ಆಸ್ಟ್ರೇಲಿಯಾ ತಂಡಕ್ಕೆ ಹೊಸ ನಾಯಕನ ಘೋಷಣೆ; ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಗತಿಯೇನು?!

ಬುಧವಾರ, 28 ಮಾರ್ಚ್ 2018 (09:29 IST)
ಸಿಡ್ನಿ: ಚೆಂಡು ವಿರೂಪ ಪ್ರಕರಣದಿಂದ ಮಾನ ಹರಾಜಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇದೀಗ ಡ್ಯಾಮೇಜ್ ಸರಿಪಡಿಸಲು ಪ್ರಯತ್ನ ಪಡುತ್ತಿದೆ. ಇದೀಗ ನಾಯಕನನ್ನೇ ಬದಲಿಸಿದ್ದು ವಿಕೆಟ್ ಕೀಪರ್ ಟಿಮ್ ಪೇನ್ ಗೆ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಲಾಗಿದೆ.

ಸ್ಮಿತ್ ಗೆ ಐಸಿಸಿ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪಂದ್ಯದ ನಿಷೇಧ ವಿಧಿಸಿತ್ತು. ಹೀಗಾಗಿ ಮುಂದಿನ ಟೆಸ್ಟ್ ಪಂದ್ಯಕ್ಕೆ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಜತೆಗೆ ಚೆಂಡು ವಿರೂಪಗೊಳಿಸಿದ ಬ್ರಾನ್ ಕ್ರಾಫ್ಟ್ ರನ್ನು ಹೊರ ಹಾಕಲಾಗಿದೆ. ಇದೀಗ ದ.ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟಿಮ್ ಪೇನ್ ರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಟಿಮ್ ಯಶಸ್ವಿಯಾದರೆ, ಎಲ್ಲರ ಮೆಚ್ಚುಗೆಗೆ ಪಾತ್ರರಾದರೆ ಮುಂದಿನ ದಿನಗಳಲ್ಲಿ ಅವರೇ ಆಸ್ಟ್ರೇಲಿಯಾ ತಂಡದ ಖಾಯಂ ನಾಯಕರಾದರೂ ಅಚ್ಚರಿಯಿಲ್ಲ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆ ನಡೆಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ವತಂತ್ರ ತನಿಖಾ ತಂಡ ರೂಪಿಸಿದೆ. ಒಂದು ವೇಳೆ ಸ್ಮಿತ್ ಕೂಡಾ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ವಿಶ್ವ ಕ್ರಿಕೆಟ್ ನ ಪ್ರತಿಭಾವಂತ, ಸರ್ವಕಾಲಿಕ ಶ್ರೇಷ್ಠ ಆಟಗಾರನ ಭವಿಷ್ಯ ಮಂಕಾಗಲಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಮತ್ತು ಅಭಿಮಾನಿಗಳಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಿಇಒ ಸದರ್ಲ್ಯಾಂಡ್ಸ್ ಕ್ಷಮೆ ಯಾಚಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ