ಪುಣೆ: ಮೊದಲ ಅವಧಿಯಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆಸ್ಟ್ರೇಲಿಯಾ ತಾನು ಮಾಡಿಕೊಂಡು ಬಂದಿದ್ದ ತಯಾರಿಯನ್ನು ಚೆನ್ನಾಗಿಯೇ ಕಾರ್ಯ ರೂಪಕ್ಕೆ ತಂದಿತ್ತು. ಆದರೆ ಬಿಸಿಲು ಏರಿದಂತೆ ತಾಳ್ಮೆಯೂ ಕರಗಿತೋ ಏನೋ…
ಉಮೇಶ್ ಯಾದವ್ ಡೇವಿಡ್ ವಾರ್ನರ್ ವಿಕೆಟ್ ಪಡೆದಾಗಲೇ ಆಸೀಸ್ ಗೆ ಅಪಾಯದ ವಾಸನೆ ಬಡಿದಿತ್ತು. ಆ ವಿಕೆಟ್ ಗಳಿಸಿದ್ದೇ ಯಾದವ್ ಆತ್ಮ ವಿಶ್ವಾಸ ಹೆಚ್ಚುವಂತೆ ಮಾಡಿತ್ತು. ಆಗಾಗ ಚಿಮ್ಮಿ ಬರುವ ಬಾಲ್, ನಿಧಾನಗತಿಯ ಬಾಲ್ ಗಳಲ್ಲಿ ಸಿಗುತ್ತಿದ್ದ ತಿರುವು ಉಮೇಶ್ ಇಂದು ಉಗ್ರಾವತಾರ ತಾಳಿದ್ದರು. ಪರಿಣಾಮ ಅವರ ಜೋಳಿಗೆಗೆ 4 ವಿಕೆಟ್ ಲಭಿಸಿತು. ದಿನದಂತ್ಯಕ್ಕೆ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 256 ರನ್ ಗಳಿಸಿತು.
ಉಮೇಶ್ ಜತೆಗೆ ಇನ್ನೊಂದೆಡೆ ಸ್ಪಿನ್ ಧ್ವಯರಾದ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ಒತ್ತಡ ಹೇರಿದರು. ಇದು ಉಮೇಶ್ ಯಾದವ್ ಕೆಲಸ ಸುಲಭವಾಗಿಸಿತು. ಫಲವಾಗಿ ಆಸೀಸ್ ಬ್ಯಾಟ್ಸ್ ಮನ್ ಗಳು ನೆಲಕ್ಕೆ ಕಚ್ಚಿ ನಿಲ್ಲುತ್ತಿದ್ದಾರೆಂದು ಅನಿಸುತ್ತಲೇ ವಿಕೆಟ್ ನ್ನೂ ಒಪ್ಪಿಸುತ್ತಿದ್ದರು.
ನಾಯಕ ಸ್ಟೀವ್ ಸ್ಮಿತ್ ಇಂದು ಅದ್ಭುತವಾಗಿ ಇನಿಂಗ್ಸ್ ಶುರು ಮಾಡಿದ್ದರು. ಸ್ಪಿನ್ನರ್ ಗಳನ್ನು ಅತ್ಯುತ್ತಮವಾಗಿ ನಿಭಾಯಿಸುತ್ತಿದ್ದರು. ಉಪ ಖಂಡದ ಪಿಚ್ ಗಳಲ್ಲಿ ಆಡುವಾಗ ಬೇಕಾದ ತಾಳ್ಮೆ, ಫೂಟ್ ವರ್ಕ್, ಲೂಸ್ ಬಾಲ್ ಗಳಿಗೆ ಕಾಯಬೇಕಾದ ಜಾಣ್ಮೆ ಎಲ್ಲವೂ ಅವರ ಆಟದಲ್ಲಿತ್ತು. ಆದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಇದ್ದವರಲ್ಲಿ ಗಾಯಾಳುವಾಗಿ ಪೆವಿಲಿಯನ್ ಗೆ ಮರಳಿ ವಾಪಸಾದ ಮ್ಯಾಟ್ ರೆನ್ ಶೋ ಆಟವೇ ಪರವಾಗಿಲ್ಲ. 68 ರನ್ ಗಳಿಸಿ ಮಿಂಚಿದರು. ಕೊನೆಯಲ್ಲಿ ಬಂದ ಮಿಚೆಲ್ ಸ್ಟಾರ್ಕ್ ಕೂಡಾ ಚುರುಕಿನ ಅರ್ಧಶತಕ ಗಳಿಸಿ ಮಿಂಚಿದರು. ಆದರೂ ಈ ಪಿಚ್ ನ ಸಂಪೂರ್ಣ ಲಾಭ ಪಡೆದ ಭಾರತೀಯರು ಇಂದಿನ ದಿನದ ಗೌರವ ಪಡೆದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ