ಏಷ್ಯಾ ಕಪ್ ಗೆ ತಿಲಕ್ ವರ್ಮ ಬಿಟ್ಟು ಶುಭಮನ್ ಗಿಲ್ ಗೆ ಮಣೆ: ಇದೆಂಥಾ ಲೆಕ್ಕಾಚಾರ

Krishnaveni K

ಸೋಮವಾರ, 18 ಆಗಸ್ಟ್ 2025 (10:30 IST)
Photo Credit: X
ಮುಂಬೈ: ಮುಂಬರುವ ಏಷ್ಯಾ ಕಪ್ ಟೂರ್ನಿಗೆ ತಿಲಕ್ ವರ್ಮಾರನ್ನು ಕೈ ಬಿಟ್ಟು ಶುಭಮನ್ ಗಿಲ್ ಗೆ ಮಣೆ ಹಾಕಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್ ಟೂರ್ನಿ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇನಲ್ಲಿ ನಡೆಯಲಿದೆ. ಏಷ್ಯಾ ಕಪ್ ಟೂರ್ನಿ ಬಗ್ಗೆ ಚರ್ಚಿಸಲು ನಾಳೆ ಬಿಸಿಸಿಐ ಸಭೆ ಸೇರುವ ಸಾಧ್ಯತೆಯಿದೆ. ಈ ವೇಳೆ ತಂಡದ ಆಯ್ಕೆ ಸಂಬಂಧ ಚರ್ಚೆ ನಡೆಯಲಿದೆ.

ಇದರ ನಡುವೆ ತಿಲಕ್ ವರ್ಮಾರನ್ನು ತಂಡದಿಂದ ಕೈ ಬಿಟ್ಟು ಶುಭಮನ್ ಗಿಲ್ ಗೆ ಅವಕಾಶ ನೀಡುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಇದಕ್ಕೆ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಸಂಪೂರ್ಣವಾಗಿ ಯುವ ಪಡೆಯನ್ನು ಕಣಕ್ಕಳಿಸುತ್ತದೆ. ಅದರಲ್ಲೂ ತಿಲಕ್ ವರ್ಮ, ಅಭಿಷೇಕ್ ಶರ್ಮ, ಜಿತೇಶ್ ಶರ್ಮ ಕಿರು ಮಾದರಿಯ ಸ್ಟಾರ್ ಆಟಗಾರರಾಗಿದ್ದಾರೆ.

ಆದರೆ ಈಗ ತಿಲಕ್ ವರ್ಮಾರನ್ನೇ ಕೈ ಬಿಟ್ಟು ಟೆಸ್ಟ್ ನಾಯಕ ಶುಭಮನ್ ಗಿಲ್ ರನ್ನು ಆಯ್ಕೆ ಮಾಡುವ ಪ್ರಸ್ತಾಪದ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದರು. ಗಿಲ್ ಗೆ ಹೋಲಿಸಿದರೆ ತಿಲಕ್ ವರ್ಮ ಟಿ20 ಫಾರ್ಮ್ಯಾಟ್ ನ ಶ್ರೇಷ್ಠ ಆಟಗಾರ. ಅವರನ್ನು ಹೊರಗಿಡುವುದು ಅತ್ಯಂತ ಕೆಟ್ಟ ನಿರ್ಧಾರವಾಗಲಿದೆ ಎಂದಿದ್ದಾರೆ.

ಇನ್ನೊಂದೆಡೆ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಶ್ರೇಯಸ್ ಅಯ್ಯರ್ ಗೆ ಸ್ಥಾನ ಸಿಗುವುದು ಬಹುತೇಕ ಅನುಮಾನವಾಗಿದೆ. ಹಿರಿಯ ವೇಗಿ ಜಸ್ಪ್ರೀತ್  ಬುಮ್ರಾ ಆಯ್ಕೆಗೆ ಲಭ್ಯರಿರುವುದಾಗಿ ಹೇಳಿದ್ದಾರೆ. ಹೀಗಾಗಿ ಅವರು ತಂಡಕ್ಕೆ ಆಯ್ಕೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ