ಪೂಜಾರ ಹಿಡಿದ ಆ ಅದ್ಭುತ ಕ್ಯಾಚ್ ಗೆ ಬಿದ್ದ ಆಸ್ಟ್ರೇಲಿಯಾ

ಗುರುವಾರ, 16 ಮಾರ್ಚ್ 2017 (11:30 IST)
ರಾಂಚಿ:  ಧೋನಿ ತವರಿನಲ್ಲಿ ನಡೆಯುತ್ತಿರವ ತೃತೀಯ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಿ ಭೋಜನ ವಿರಾಮಕ್ಕಾಗುವಾಗ 3 ವಿಕೆಟ್ ನಷ್ಟಕ್ಕೆ 109  ರನ್ ಗಳಿಸಿದೆ. ಚೇತೇಶ್ವರ ಪೂಜಾರ ಹಿಡಿದ ಆ ಅದ್ಭುತ ಕ್ಯಾಚ್ ಆಸ್ಟ್ರೇಲಿಯಾದ ದೊಡ್ಡ ಮೊತ್ತದ ಕನಸಿಗೆ ಬ್ರೇಕ್ ಹಾಕಿದೆ.

 
ಹಾಗೆ ನೋಡಿದರೆ, ಈ ಪಂದ್ಯ ಮೊದಲೆರಡು ಪಂದ್ಯಗಳಂತಿಲ್ಲ. ಮೊದಲೆರಡು ಪಂದ್ಯಗಳಲ್ಲೂ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡುತ್ತಿದ್ದರು. ಆದರೆ ಇಲ್ಲಿ ನಿಂತು ಆಡಿದರೆ ರನ್ ಗಳಿಸುವುದು ಕಷ್ಟವೇನಲ್ಲ. ಆದರೂ ಭಾರತೀಯ ಬೌಲರ್ ಗಳು ಶಿಸ್ತಿನಿಂದ ಬೌಲಿಂಗ್ ನಡೆಸಿ ಆಸ್ಟ್ರೇಲಿಯನ್ನರ ಬೆವರಿಳಿಸುತ್ತಿದ್ದಾರೆ.

ಮೊದಲ ವಿಕೆಟ್ ಗೆ ರೆನ್ ಶೋ  ಮತ್ತು ಡೇವಿಡ್ ವಾರ್ನರ್ ಅರ್ಧಶತಕದ ಜತೆಯಾಟವಾಡಿದರು. ವಾರ್ನರ್ ಇಂದು ಕೂಡಾ ವಿಫಲರಾದರೆ, ರೆನ್ ಶೋ 44 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ಅಶ್ವಿನ್ ಗೆ ವಾರ್ನರ್ ವಿಕೆಟ್ ಸಿಗಲಿಲ್ಲ. ಅದು ಜಡೇಜಾ ಪಾಲಾಯಿತು.

ಉಮೇಶ್ ಯಾದವ್ ಅದ್ಭುತ ಲಯದಲ್ಲಿರುವಂತೆ ತೋರುತ್ತಿದ್ದಾರೆ. ಅವರ ಶ್ರಮಕ್ಕೆ ರೆನ್ ಶೋ ವಿಕೆಟ್ ಸಿಕ್ಕಿತು. ಹೊಡೆ ಬಡಿಯ ಆಟಗಾರ ಶಾನ್ ಮಾರ್ಷ್ ಭೋಜನ ವಿರಾಮಕ್ಕೆ ಕೆಲವೇ ಕ್ಷಣಗಳ ಮೊದಲು ಅಶ್ವಿನ್ ಸ್ಪಿನ್ ಮೋಡಿಗೆ ಬಿದ್ದರು. ಅದಕ್ಕಿಂತಲೂ ಹೆಚ್ಚು, ಮಾರ್ಷ್ ಬ್ಯಾಟಿಗೆ ಒರೆಸಿಕೊಂಡ ಹೋದ ಬಾಲ್ ನ್ನು ಚೇತೇಶ್ವರ ಪೂಜಾರ ಅದ್ಭುತವಾಗಿ ಹಿಡಿದರು.

ಇದುವೇ ಆಸ್ಟ್ರೇಲಿಯಾ ಕುಸಿತಕ್ಕೆ ನಾಂದಿ ಹಾಡಿದರೂ, ಅಚ್ಚರಿಯೇನಿಲ್ಲ. ಆದರೆ ಅಪಾಯಕಾರಿ ಬ್ಯಾಟ್ಸ್ ಮನ್ ನಾಯಕ ಸ್ವೀವ್ ಸ್ಮಿತ್ ಇನ್ನೂ ಕ್ರೀಸ್ ನಲ್ಲಿದ್ದು, 34 ರನ್ ಗಳಿಸಿ ಆಡುತ್ತಿದ್ದಾರೆ. ಅವರ ಜತೆಗೆ ಪೀಟರ್ ಹ್ಯಾಂಡ್ಸ್ ಕೋಂಬ್ 6 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇವರು ನೆಲ ಕಚ್ಚಿ ನಿಂತರೆ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ