ಲಂಡನ್: ಭಾರತದ 14 ವರ್ಷದ ಪೋರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧ ಯುವ ಏಕದಿನ (19 ವರ್ಷದೊಳಗಿವರ) ಕ್ರಿಕೆಟ್ ಪಂದ್ಯದಲ್ಲಿ ಅಬ್ಬರಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ವೈಭವ್ ಕೇವಲ 78 ಎಸೆತಗಳಲ್ಲಿ 143 ರನ್ ಬಾರಿಸಿದರು. ಆ ಹಾದಿಯಲ್ಲಿ ಮತ್ತಷ್ಟು ದಾಖಲೆಗಳನ್ನು ಮುರಿದರು. ಸರಣಿಯ ನಾಲ್ಕನೇ ಪಂದ್ಯ 55 ರನ್‌ಗಳಿಂದ ಗೆದ್ದು ಭಾರತ ಸರಣಿಯನ್ನು 3–1 ರಿಂದ ಜಯಿಸಿತು.
ವೈಭವ್ ಯುವ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಅತಿ ಕಿರಿಯ ಆಟಗಾರ ಎನಿಸಿದರು. ಈ ಹಿಂದಿನ ದಾಖಲೆ ಬಾಂಗ್ಲಾದೇಶದ ನಜ್ಮುಲ್ ಹುಸೇನ್ ಶಾಂತೊ ಹೆಸರಿನಲ್ಲಿತ್ತು. ಇದು ಯುವ ಏಕದಿನ ಕ್ರಿಕೆಟ್‌ನ ಅತಿ ವೇಗದ ಶತಕವಾಗಿದೆ. ಈ ಹಿಂದಿನ ದಾಖಲೆ ಪಾಕಿಸ್ತಾನದ ಕ್ರಮಾನ್ ಗುಲಾಂ (2013ರಲ್ಲಿ ಇಂಗ್ಲೆಂಡ್ 19 ವರ್ಷದೊಳಗಿನ ತಂಡದ ವಿರುದ್ಧ 53 ಎಸೆತಗಳಲ್ಲಿ) ಹೆಸರಿನಲ್ಲಿತ್ತು.
ಮೊದಲು ಆಡಿದ ಭಾರತ 9 ವಿಕೆಟ್‌ಗೆ 369 ರನ್‌ಗಳ ಭಾರಿ ಮೊತ್ತ ಗಳಿಸಿತು. ಇಂಗ್ಲೆಂಡ್ ಹೋರಾಟ ತೋರಿದರೂ 45.3 ಓವರುಗಳಲ್ಲಿ 308 ರನ್‌ಗಳಿಗೆ ಆಟ ಮುಗಿಸಿತು.
ಈ ಪಂದ್ಯದಲ್ಲಿ ಆರಂಭ ಆಟಗಾರ ವೈಭವ್ ಜೊತೆಗೆ ಮಧ್ಯಮ ಕ್ರಮಾಂಕದ ಆಟಗಾರ ವಿಹಾನ್ ಮಲ್ಹೋತ್ರಾ ಕೂಡ ಶತಕ (129, 121 ಎಸೆತ, 4x6, 6x9) ಬಾರಿಸಿದರು. ಸೂರ್ಯವಂಶಿ ಇನಿಂಗ್ಸ್‌ನಲ್ಲಿ 13 ಬೌಂಡರಿ, 10 ಸಿಕ್ಸರ್‌ಗಳಿದ್ದವು. ಇವರಿಬ್ಬರು ಎರಡನೇ ವಿಕೆಟ್‌ಗೆ 219 ರನ್ ಜೊತೆಯಾಟದಲ್ಲಿ ಭಾಗಿಯಾದರು. ವೈಭವ್ 52 ಎಸೆತಗಳಲ್ಲಿ ಶತಕ ದಾಟಿದರು.