ಅದ್ಭುತ ಪಂದ್ಯವೊಂದನ್ನು ನೀರಸ ಡ್ರಾದತ್ತ ನೂಕಿದ ಆಸ್ಟ್ರೇಲಿಯಾ

ಸೋಮವಾರ, 20 ಮಾರ್ಚ್ 2017 (16:24 IST)
ರಾಂಚಿ: ಭೋಜನ ವಿರಾಮದವರೆಗೂ ಭಾರತ ತೃತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತದೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಐದನೇ ವಿಕೆಟ್ ಗೆ ಜತೆಯಾದ ಶಾನ್ ಮಾರ್ಷ್ ಮತ್ತು ಪೀಟರ್ ಹ್ಯಾಂಡ್ಸ್ ಕೋಂಬ್ ಪಂದ್ಯವನ್ನು ನೀರಸ ಡ್ರಾದತ್ತ ಕೊಂಡೊಯ್ದರು.

 

 
ಭೋಜನ ವಿರಾಮ ಮುಗಿದ ಮೇಲೆ ಚಹಾ ವಿರಾಮದವರೆಗೆ ವಿಕೆಟ್ ಕಳೆದುಕೊಳ್ಳದೇ ಆಸ್ಟ್ರೇಲಿಯಾದ ಈ ಜೋಡಿ ಗಟ್ಟಿಯಾಗಿ ನಿಂತಿದ್ದು ಭಾರತದ ಗೆಲುವನ್ನು ಕಸಿದುಕೊಂಡಿತು. ಇದರಲ್ಲಿ ಮಾರ್ಷ್ ಕೊಡುಗೆ 53 ರನ್, ಹ್ಯಾಂಡ್ಸ್ ಕೋಂಬ್ ಔಟಾಗದೇ 72 ರನ್.  ಇವರಿಬ್ಬರು 124 ರನ್ ಜತೆಯಾಟವಾಡಿದ್ದು ಭಾರತಕ್ಕೆ ದುಬಾರಿಯಾಯಿತು. ದಿನದಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.

 
ನೆರೆದಿದ್ದ ಪ್ರೇಕ್ಷಕರೂ ಇವರ ನೀರಸ ಆಟ ನೋಡಿ ನಿರಾಸೆಯಿಂದಲೇ ಮರಳಿದರು. ಪಂದ್ಯ ನಡುವೆ ಸ್ಥಳೀಯ ಹೀರೋ ಧೋನಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕೊಂಚ ಮನರಂಜನೆ ನೀಡಿದರು. ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿದರು. ಅದು ಬಿಟ್ಟರೆ, ಇಂದಿನ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಮ್ಯಾಜಿಕ್ ನಡೆಯಲಿಲ್ಲ.

 
ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಕಿತ್ತು ಮಿಂಚಿದ್ದ ರವೀಂದ್ರ ಜಡೇಜಾ ಒಬ್ಬರೇ ಭಾರತದ ಪರ ಘಾತಕ ದಾಳಿ ಸಂಘಟಿಸಿ ದ್ವಿತೀಯ ಇನಿಂಗ್ಸ್ ನಲ್ಲೂ 4 ವಿಕೆಟ್ ಕಿತ್ತರು. ಆದರೆ ಅವರಿಗೆ ಇನ್ನೊಂದು ತುದಿಯಿಂದ ಅಷ್ಟೊಂದು ಬೆಂಬಲ ಸಿಗಲಿಲ್ಲ.  ಮುಖ್ಯವಾಗಿ ಅಶ್ವಿನ್ ಎರಡೂ ಇನಿಂಗ್ಸ್ ಗಳಲ್ಲಿ ವಿಫಲರಾದರು. ಇದರಿಂದಾಗಿ ಗೆದ್ದು ಬೀಗಬೇಕಿದ್ದ ಭಾರತ, ನಿರಾಸೆ ಅನುಭವಿಸಬೇಕಾಯಿತು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ