ಮೂರು ಮಾದರಿಗಳಲ್ಲಿ ಸ್ಮೃತಿ ಮಂದಾನಾ ಶತಕ: ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

Sampriya

ಭಾನುವಾರ, 29 ಜೂನ್ 2025 (10:47 IST)
Photo Credit X
ಲಂಡನ್‌: ಭಾರತ ಟಿ20 ಕ್ರಿಕೆಟ್‌ ವನಿತೆಯರ ತಂಡದ ನಾಯಕಿ ಸ್ಮೃತಿ ಮಂದಾನಾ ಟಿ20 ಮಾದರಿಯಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಮೂಲಕ ಹಲವು ದಾಖಲೆ ನಿರ್ಮಿಸಿದ್ದಾರೆ. 

ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಪರ ಹಲವು ದಾಖಲೆ ನಿರ್ಮಿಸಿದ್ದಾರೆ. ಟಿ20, ಏಕದಿನ, ಟೆಸ್ಟ್​ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಂದಾನಾ  ಪಾತ್ರರಾಗಿದ್ದಾರೆ. 

ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಮೂರು ಮಾದರಿಯ ಕ್ರಿಕೆಟಿನಲ್ಲಿ ಸೆಂಚುರಿ ಬಾರಿಸಿದ 5ನೇ ಆಟಗಾರ್ತಿಯಾಗಿದ್ದಾರೆ. ಈತನಕ ಸ್ಮೃತಿ ಏಕದಿನದಲ್ಲಿ 11, ಟೆಸ್ಟ್​ನಲ್ಲಿ 2 ಹಾಗೂ ಈಗ ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 5 ವಿಕೆಟ್‌ ನಷ್ಟಕ್ಕೆ 210 ರನ್‌ ಹೊಡೆಯಿತು. ಮಂದಾನಾ 27 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 51 ಎಸೆತಗಳಲ್ಲಿ ಶತಕ ಹೊಡೆದರು. ಅಂತಿಮವಾಗಿ ಮಂದಾನಾ 112 ರನ್‌ (62 ಎಸೆತ, 15 ಬೌಂಡರಿ, 3 ಸಿಕ್ಸರ್‌) 20ನೇ ಓವರಿನ 2ನೇ ಎಸೆತದಲ್ಲಿ 5ನೇಯವರಾಗಿ ವಿಕೆಟ್‌ ಒಪ್ಪಿಸಿದರು.

ಈ ಸವಾಲನ್ನು ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್‌ 14.5 ಓವರ್‌ಗಳಲ್ಲಿ 113 ರನ್‌ಗಳಿಗೆ ಹೋರಾಟ ಮುಗಿಸಿತು. ಇದರೊಂದಿಗೆ ಭಾರತ 97 ರನ್‌ಗಳ ಭರ್ಜರಿ ಜಯ ಗಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ