ಮಳೆ ನಿಂತರೂ ಹನಿ ನಿಲ್ಲುವುದಿಲ್ಲ ಎಂಬಂತೆ ಟೆಸ್ಟ್ ಸರಣಿ ಮುಗಿದರೂ ವಾಗ್ದಾಳಿಗಳು ಮಾತ್ರ ನಿಂತಿಲ್ಲ. ಆಸೀಸ್ ಕ್ಯಾಪ್ಟನ್ ಸ್ಟೀವ್ ಸ್ಮಿತ್, ಆಸೀಸ್ ಮಾಧ್ಯಮಗಳ ಬಳಿಕ ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾದ ಮಾಜಿ ಓಪನರ್ ಇ.ಡಿ. ಕೋವನ್ ವಾಗ್ದಾಳಿ ನಡೆಸಿದ್ದಾರೆ.
ಆ ಕ್ಷಣ ವಿಕೆಟ್ ಕಿತ್ತು ಕೊಹ್ಲಿಗೆ ತಿವಿದುಬಿಡಬೇಕೆಂದುಕೊಂಡಿದ್ದೆ ಎಂದು ಕೋವನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕೊವನ್`ಗೆ ಇಂಥಾ ಕೆಂಡದಂಥಾ ಕೋಪ ಬರಲು ಕೊಹ್ಲಿ ಮಾತು ಕಾರಣವಂತೆ. ಪಂದ್ಯವೊಂದರಲ್ಲಿ ಕೊಹ್ಲಿ ನನ್ನ ವಿರುದ್ಧ ವೈಯಕ್ತಿಕ ವಿಷಯವನ್ನ ಸೂಚಿಸುವ ಅಶ್ಲೀಲ ಪದ ಬಳಕೆ ಮಾಡಿದ್ದರು. ಆದರೆ, ಕೊಹ್ಲಿಗೆ ಅದು ಮನವರಿಕೆ ಆಗಲೇ ಇಲ್ಲ. ಅಷ್ಟರೊಳಗೆ ಅಂಪೈರ್ ಮಧ್ಯಪ್ರವೇಶಿಸಿ ಮನವರಿಕೆ ಮಾಡಿಕೊಟ್ಟ ಬಳಿಕ ಕ್ಷಮೆ ಕೋರಿದರು. ಆದರೆ, ಆ ಕ್ಷಣ ವಿಕೆಟ್ ಕಿತ್ತು ಚುಚ್ಚಿಬಿಡಬೇಕೆನ್ನಿಸಿತು ಎಂದು ಕೋವನ್ ಹೇಳಿದ್ದಾರೆ.
ಬೆಂಗಳೂರಲ್ಲಿ ನಡೆದ ಡಿಆರ್`ಎಸ್ ಡ್ರಾಮಾ ಬಳಿಕ ಆಸೀಸ್ ಆಟಗಾರರು ಒಬ್ಬರ ಹಿಂದೊಬ್ಬರಂತೆ ಕೊಹ್ಲಿ ವಿರುದ್ಧ ಮುಗಿಬೀಳುತ್ತಿದ್ದಾರೆ. ಸ್ಮಿತ್ ತಪ್ಪನ್ನ ಎತ್ತಿತೋರಿಸಿದ ನಾಯಕ ವಿರಾಟ್ ಕೊಹ್ಲಿಯನ್ನೇ ಖಳನಾಯಕನಂತೆ ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಆಸಿಸ್ ಮಾಧ್ಯಮಗಳೂ ಸಾಥ್ ನೀಡಿರುವುದು ದುರಂತ.