ಬೆಸ್ಟ್ ಬೌಲಿಂಗ್ ತಂದೆಗೆ ಅರ್ಪಣೆ, ಕ್ರೆಡಿಟ್ ಕೋಚ್ ದ್ರಾವಿಡ್ ಗೆ ಎಂದ ಆವೇಶ್ ಖಾನ್
ಆವೇಶ್ ಖಾನ್ ಮೊದಲ ಮೂರು ಪಂದ್ಯಗಳಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದರು. ಹೀಗಾಗಿ ಅವರನ್ನು ಕಿತ್ತು ಹಾಕಿ ಉಮ್ರಾನ್ ಮಲಿಕ್ ಗೆ ಅವಕಾಶ ನೀಡಬೇಕೆಂದು ಕೋಚ್ ದ್ರಾವಿಡ್ ಮೇಲೆ ಭಾರೀ ಒತ್ತಡವಿತ್ತು. ಹಾಗಿದ್ದರೂ ದ್ರಾವಿಡ್ ಯಾವುದೇ ಒತ್ತಡಕ್ಕೆ ಮಣಿಯದೇ ಆವೇಶ್ ಖಾನ್ ಗೆ ನಾಲ್ಕನೇ ಪಂದ್ಯದಲ್ಲೂ ಅವಕಾಶ ನೀಡಿದರು. ಅವರ ನಿರೀಕ್ಷೆ ಹುಸಿಗೊಳಿಸದ ಆವೇಶ್ 4 ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣವಾದರು.
ಈ ಪ್ರದರ್ಶನದ ಬಳಿಕ ಮಾತನಾಡಿದ ಆವೇಶ್ ಖಾನ್ ಮೊದಲ ಮೂರು ಪಂದ್ಯಗಳಲ್ಲಿ ವಿಕೆಟ್ ಕೀಳಲು ವಿಫಲವಾಗಿದ್ದರಿಂದ ನನ್ನ ಮೇಲೆ ಒತ್ತಡವಿತ್ತು. ಕೋಚ್ ದ್ರಾವಿಡ್ ಭಾಯಿಗೆ ನಾನು ಧನ್ಯವಾದ ಹೇಳಬೇಕು. ನನ್ನ ಮೇಲೆ ವಿಶ್ವಾಸವಿಟ್ಟು ನಾಲ್ಕನೇ ಪಂದ್ಯದಲ್ಲೂ ಅವಕಾಶ ನೀಡಿದರು. ದ್ರಾವಿಡ್ ಸರ್ ಯಾವತ್ತೂ ಒಂದು-ಎರಡು ಪಂದ್ಯದಲ್ಲಿ ಪ್ರದರ್ಶನ ನೀಡಲಿಲ್ಲ ಎಂದು ಆಟಗಾರರನ್ನು ಕಿತ್ತು ಹಾಕಲ್ಲ. ನಮಗೆ ಸಾಬೀತುಪಡಿಸಲು ಸಾಕಷ್ಟು ಅವಕಾಶ ಸಿಗುತ್ತದೆ. ಇದಕ್ಕೆ ನಾನು ಅವರಿಗೆ ಧನ್ಯವಾದ ಹೇಳಲೇಬೇಕು. ಇಂದು ನನ್ನ ತಂದೆಯ ಜನ್ಮದಿನ. ಹೀಗಾಗಿ ಈ ಪ್ರದರ್ಶನವನ್ನು ತಂದೆಗೆ ಅರ್ಪಿಸುತ್ತಿದ್ದೇನೆ ಎಂದಿದ್ದಾರೆ ಯುವ ವೇಗಿ.