ರಾಜ್ ಕೋಟ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ವೇಗಿ ಆವೇಶ್ ಖಾನ್ ಭರ್ಜರಿ ಬೌಲಿಂಗ್ ನಿಂದಾಗಿ ಟೀಂ ಇಂಡಿಯಾ 82 ರನ್ ಗಳ ಗೆಲುವು ಸಾಧಿಸಿದೆ.
ಇದರೊಂದಿಗೆ ಸರಣಿ 2-2 ರಿಂದ ಸಮಬಲಗೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತ್ತು.
ಈ ಮೊತ್ತ ಬೆನ್ನತ್ತಿದ ಆಫ್ರಿಕಾಗೆ ಟೀಂ ಇಂಡಿಯಾ ಬೌಲರ್ ಗಳು ಕಾಡಿದರು. ಸಂಘಟಿತ ದಾಳಿ ನಡೆಸಿದ ಟೀಂ ಇಂಡಿಯಾ ಬೌಲರ್ ಗಳಿಂದಾಗಿ ಆಫ್ರಿಕಾ 16.5 ಓವರ್ ಗಳಲ್ಲಿ ಕೇವಲ 87 ರನ್ ಗಳಿಗೆ ಆಲೌಟ್ ಆಯಿತು.
ಭಾರತದ ಪರ ಮಾರಕ ದಾಳಿ ಸಂಘಟಿಸಿದ ಆವೇಶ್ ಖಾನ್ 4 ವಿಕೆಟ್ ಕಿತ್ತರೆ, ಯಜುವೇಂದ್ರ ಚಾಹಲ್ 2, ಅಕ್ಸರ್ ಪಟೇಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದರು. ಭುವನೇಶ್ವರ್ ಕುಮಾರ್ ವಿಕೆಟ್ ಕೀಳಲು ವಿಫಲರಾದರೂ ರನ್ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ (14), ದಸೆನ್ (20), ಜೇನ್ಸನ್ (12) ಬಿಟ್ಟರೆ ಉಳಿದವರು ಯಾರೂ ಎರಡಂಕಿ ಮೊತ್ತವನ್ನೂ ದಾಟಲಿಲ್ಲ. ಇದರೊಂದಿಗೆ ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಅಂತಿಮ ಟಿ20 ಪಂದ್ಯಕ್ಕೆ ಫೈನಲ್ ಕಳೆ ಬಂದಿದೆ.