ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಕೇಕೆ ಹಾಕಿದ ಬಾಂಗ್ಲಾದೇಶ ಢಾಕಾ

ಬುಧವಾರ, 30 ಆಗಸ್ಟ್ 2017 (14:22 IST)
ಢಾಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನ ಆತಿಥೇಯ ಬಾಂಗ್ಲಾದೇಶ 20 ರನ್`ಗಳಿಂದ ಸೋಲಿಸುವ ಮೂಲಕ ಕಾಂಗರೂಗಳಿಗೆ ಮರ್ಮಾಘಾತವನ್ನುಂಟು ಮಾಡಿದೆ. ಎರಡೂ ಇನ್ನಿಂಗ್ಸ್`ಗಳಿಂದ 10 ವಿಕೆಟ್ ಉರುಳಿಸಿದ ಶಕೀಬ್ ಕಾಂಗರೂಗಳಿಗೆ ಸಿಂಹ ಸ್ವಪ್ನರಾದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 260 ರನ್`ಗಳನ್ನ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 217 ರನ್`ಗಳಿಗೆ ಆಲೌಟ್ ಆಗುವದರೊಂದಿಗೆ 43 ರನ್`ಗಳ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್`ನಲ್ಲಿ ಬಾಂಗ್ಲಾದೇಶ ತಂಡ 221 ರನ್`ಗೆ ಆಲೌಟ್ ಆಗುವುದರೊಂದಿಗೆ 264 ರನ್`ಗಳ ಮುನ್ನಡೆ ಪಡೆಯಿತು. 265 ರನ್`ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಬಾಂಗ್ಲಾ ಹುಲಿಗಳ ಬೌಲಿಂಗ್ ಅಬ್ಬರದೆದುರು ನಿಲ್ಲಲಿಲ್ಲ. ಡೇವಿಡ್ ವಾರ್ನರ್ ಶತಕ(112) ಸಿಡಿಸಿ ಹೋರಾಟ ನಡೆಸಿದರಾದರೂ ಬೇರೆ ಬ್ಯಾಟ್ಸ್`ಮನ್`ಗಳಿಂದ ಸಾಥ್ ಸಿಗಲಿಲ್ಲ. ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ತಂಡ 244 ರನ್`ಗಳಿಗೆ ಆಲೌಟ್ ಆಗುವುದರೊಂದಿಗೆ ಸೋಲೊಪ್ಪಿಕೊಂಡಿತು.

ಎರಡೂ ಇನ್ನಿಂಗ್ಸ್`ಗಳಲ್ಲೂ ಜೀವನ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ ಶಕಿಬ್ ಅಲ್ ಹಸನ್ ಕಾಂಗರೂ ಬ್ಯಾಟ್ಸ್`ಮನ್`ಗಳನ್ನ ಇನ್ನಿಲ್ಲದಂತೆ ಕಾಡಿದರು. ಎರಡೂ ಇನ್ನಿಂಗ್ಸ್`ಗಳಲ್ಲಿ ತಲಾ ಐದೈದು ವಿಕೆಟ್ ಪಡೆದ ಶಕಿಬ್ ಅಲ್ ಹಸನ್ ಬಾಂಗ್ಲಾದೇಶದ ಗೆಲುವಿನ ರೂವಾರಿಯಾದರು.  ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡ 1-0 ಮುನ್ನಡೆ ಸಾಧಿಸಿದೆ. ಅನಿರೀಕ್ಷಿತ ಫಲಿತಾಂಶದ ಮೂಲಕ ಬಲಿಷ್ಠ ತಂಡಗಳಿಗೆ ಶಾಕ್ ನೀಡುವ ಬಾಂಗ್ಲಾದೇಶ ತಂಡ ಇದೀಗ ಆಸ್ಟ್ರೇಲಿಯಾ ತಂಡವನ್ನೂ ಬೆಚ್ಚಿ ಬೀಳಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ