ಮುಂಬೈ: ಟೀಂ ಇಂಡಿಯಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಖಾಯಂ ವಿಕೆಟ್ ಕೀಪರ್ ಕೊರತೆ ಕಾಡುತ್ತಿದೆ. ಕಳೆದ ಆಫ್ರಿಕಾ ಸರಣಿಯಲ್ಲಿ ಕೆಎಲ್ ರಾಹುಲ್ ತಂಡದ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದರು.
ಆದರೆ ಪ್ರಮುಖ ಬ್ಯಾಟಿಗನಾಗಿರುವ ಕೆಎಲ್ ರಾಹುಲ್ ಗೆ ಎಲ್ಲಾ ಮಾದರಿಯಲ್ಲೂ ವಿಕೆಟ್ ಕೀಪರ್ ಹೊರೆ ಹೊರಿಸುವುದು ಬಿಸಿಸಿಐಗೆ ಇಷ್ಟವಿಲ್ಲ. ಸುದೀರ್ಘ ಮಾದರಿಯಲ್ಲಿ ರಾಹುಲ್ ಬದಲು ಇಶಾನ್ ಗೆ ವಿಕೆಟ್ ಕೀಪಿಂಗ್ ಹೊಣೆ ನೀಡುವ ಉದ್ದೇಶ ಆಯ್ಕೆಗಾರರಿಗಿದೆ.
ಈ ಕಾರಣಕ್ಕೆ ಇಶಾನ್ ಕಿಶನ್ ಗೆ ರಣಜಿ ಆಡಲು ಬಿಸಿಸಿಐ ಸೂಚಿಸಿದೆ. ಸದ್ಯಕ್ಕೆ ಇಶಾನ್ ರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ಹೊರಗಿಡಲಾಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂಬ ವರದಿಗಳಿತ್ತು. ಆದರೆ ಅದನ್ನು ಕೋಚ್ ದ್ರಾವಿಡ್ ಅಲ್ಲಗಳೆದಿದ್ದರು.
ಇದೀಗ ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಇಶಾನ್ ಕೀಪಿಂಗ್ ಮಾಡುವ ಸಾಧ‍್ಯತೆಯಿದ್ದು, ಅದಕ್ಕಾಗಿ ಇದೀಗ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಿದೆ.