ಗಾಯಾಳು ಶಮಿ, ರಿಷಬ್ ಪಂತ್, ಪೃಥ್ವಿ ಶಾರನ್ನು ಲಂಡನ್ ಗೆ ರವಾನಿಸಲಿರುವ ಬಿಸಿಸಿಐ
ಒಂದೆಡೆ ಟಿ20 ವಿಶ್ವಕಪ್ ಹತ್ತಿರವಾಗುತ್ತಿದ್ದು, ಭಾರತದ ಕೀ ಆಟಗಾರರೇ ಗಾಯದಿಂದಾಗಿ ಒಬ್ಬೊಬ್ಬರಾಗಿ ಹೊರಗುಳಿಯುತ್ತಿದ್ದಾರೆ. ಈಗಾಗಲೇ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಚೇತರಿಕೆ ಕಾಣದೇ ಐಪಿಎಲ್ ಗೂ ಅನುಮಾನ ಎನ್ನುವ ಪರಿಸ್ಥಿತಿಯಲ್ಲಿದ್ದಾರೆ.
ಏಕದಿನ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ ಕೂಡಾ ವಿಶ್ವಕಪ್ ಬಳಿಕ ಗಾಯದಿಂದಾಗಿ ಒಂದೇ ಒಂದು ಪಂದ್ಯವಾಡಿಲ್ಲ. ಪಾದದ ನೋವಿಗೊಳಗಾಗಿರುವ ಶಮಿ ಇಷ್ಟು ದಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆದರೂ ಅವರ ಫಿಟ್ನೆಸ್ ಬಗ್ಗೆ ಎನ್ ಸಿಎ ತಜ್ಞರಿಗೆ ತೃಪ್ತಿಯಾಗಿಲ್ಲ. ಹೀಗಾಗಿ ಶಮಿಯನ್ನು ಹೆಚ್ಚಿನ ಪರೀಕ್ಷೆಗೆ ಲಂಡನ್ ಗೆ ರವಾನಿಸಲು ತೀರ್ಮಾನಿಸಲಾಗಿದೆ.
ಶಮಿ ಜೊತೆಗೆ ರಸ್ತೆ ಅಪಘಾತದಿಂದಾಗಿ ಕಳೆದ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿರುವ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್, ಗಾಯಗೊಂಡಿರುವ ಪೃಥ್ವಿ ಶಾ ಅವರನ್ನೂ ಲಂಡನ್ ಗೆ ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಕಳುಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಮುಂಬರುವ ವಿಶ್ವಕಪ್ ವೇಳೆಗೆ ಈ ಎಲ್ಲಾ ಆಟಗಾರರೂ ಫಿಟ್ ಆಗಿರುವುದು ಮುಖ್ಯವಾಗಿದೆ.