ಇಶಾನ್ ಕಿಶನ್ ಎಷ್ಟೇ ಬಡ್ಕೊಂಡ್ರೂ ಕರುಣೆ ತೋರದ ಬಿಸಿಸಿಐ

Krishnaveni K

ಶುಕ್ರವಾರ, 19 ಜುಲೈ 2024 (10:08 IST)
ಮುಂಬೈ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಬ್ಯಾಟಿಗ ಇಶಾನ್ ಕಿಶನ್ ಎಷ್ಟೇ ಬಾಯಿ ಬಡ್ಕೊಂಡ್ರೂ ಬಿಸಿಸಿಐ ಮಾತ್ರ ಕರುಣೆಯೇ ತೋರುತ್ತಿಲ್ಲ. ಇದೀಗ ಶ್ರೀಲಂಕಾ ವಿರುದ್ಧದ ಟಿ20, ಏಕದಿನ ಸರಣಿಗೂ ಇಶಾನ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಗೌತಮ್ ಗಂಭೀರ್ ಕೋಚ್ ಆದ ಮೇಲೆ ತಂಡದಲ್ಲಿ ತಮಗೂ ಸ್ಥಾನ ಸಿಗಬಹುದು ಎಂಬ ಭರವಸೆಯಲ್ಲಿದ್ದ ಇಶಾನ್ ಗೆ ಆಯ್ಕೆ ಸಮಿತಿ ಮತ್ತೆ ನಿರಾಸೆ ಮಾಡಿದೆ. ಟಿ20 ಮತ್ತು ಏಕದಿನ ಸರಣಿಗೆ ಎರಡರಲ್ಲೂ ಇಶಾನ್ ಗೆ ಸ್ಥಾನ ನೀಡಿಲ್ಲ. ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಗೆ ಅವಕಾಶ ನೀಡಿದರೆ ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಮತ್ತು ರಿಷಬ್ ಗೆ ಸ್ಥಾನ ನೀಡಲಾಗಿದೆ.

ಈ ಮೊದಲು ದ್ರಾವಿಡ್-ರೋಹಿತ್ ನೇತೃತ್ವದಲ್ಲಿ ಟೀಂ ಇಂಡಿಯಾಗೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಆಯ್ಕೆಯಾದರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆಂದು ನೆಪ ಹೇಳಿ ಇಶಾನ್ ತಪ್ಪಿಸಿಕೊಂಡಿದ್ದರು. ಬಳಿಕ ತಂಡಕ್ಕೆ ವಾಪಸ್ ಆಗಲು ರಣಜಿ ಆಡಬೇಕು ಎಂದು ಕೋಚ್ ದ್ರಾವಿಡ್ ಆದೇಶಿಸಿದ್ದರೂ ಕಡೆಗಣಿಸಿದ್ದರು. ಬಿಸಿಸಿಐ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕೇಳದೇ ಐಪಿಎಲ್ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.

ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತಂಡದಲ್ಲಿ ಸಂಜು ಸ್ಯಾಮ್ಸನ್, ರಿಷಬ್ ಪಂತ್ ಸ್ಥಾನ ಭದ್ರಪಡಿಸಿಕೊಂಡಿದ್ದು ಇಶಾನ್ ಗೆ ಅವಕಾಶವೇ ಇಲ್ಲದಂತಾಗಿದೆ. ಇತ್ತೀಚೆಗೆ ಇಶಾನ್ ತಮ್ಮದಲ್ಲದ ತಪ್ಪಿಗೆ ತಾನು ತಂಡದಿಂದ ಸ್ಥಾನ ಕಳೆದುಕೊಳ್ಳಬೇಕಾಯಿತು. ಅಂದು ನಾನು ನಿಜಕ್ಕೂ ಮಾನಸಿಕವಾಗಿ ಫಿಟ್ ಆಗಿರಲಿಲ್ಲ. ನನ್ನ ಪರಿಸ್ಥಿತಿ ಆವತ್ತು ಹೇಗಿತ್ತು ಎಂದು ನನ್ನ ಆತ್ಮೀಯರಿಗೆ ಮಾತ್ರ ಗೊತ್ತಿತ್ತು. ಫಾರ್ಮ್ ನಲ್ಲಿದ್ದಾಗಲೇ ನನಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ ಎಂದೆಲ್ಲಾ ಹೇಳಿಕೊಂಡಿದ್ದರು.

ಅವರು ಏನೇ ಹೇಳಿದರೂ ಈಗ ಬಿಸಿಸಿಐ ಮಾತ್ರ ತಂಡದಲ್ಲಿ ಇಶಾನ್ ಗೆ ನೋ ಎಂಟ್ರಿ ಎನ್ನುತ್ತಿದೆ. ಲಂಕಾ ಸರಣಿಗೆ ತಂಡ ಘೋಷಿಸುವ ಎರಡು ದಿನದ ಮೊದಲು ತಾವು ಬ್ಯಾಟಿಂಗ್ ಅಭ್ಯಾಸ ನಡೆಸುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಸಿ ಇಶಾನ್ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಆದರೆ ಅದೆಲ್ಲವೂ ನಿಷ್ಪಲವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ