ಮುಂಬೈ: ಇತ್ತೀಚೆಗಷ್ಟೇ ಟಿ20 ಕ್ರಿಕೆಟ್ ಗೆ ಗುಡ್ ಬೈ ಹೇಳಿರುವ ರೋಹಿತ್ ಶರ್ಮಾ ಸ್ಥಾನಕ್ಕೆ ಟೀಂ ಇಂಡಿಯಾಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ. ಶ್ರೀಲಂಕಾ ವಿರುದ್ಧ ಈ ತಿಂಗಳ ಅಂತ್ಯಕ್ಕೆ ನಡೆಯಲಿರುವ ಟಿ20 ಸರಣಿಯಲ್ಲಿ ಈ ನಾಯಕನೇ ತಂಡವನ್ನು ಮುನ್ನಡೆಸಲಿದ್ದಾರೆ.
ರೋಹಿತ್ ಶರ್ಮಾರಿಂದ ತೆರವಾದ ಸ್ಥಾನಕ್ಕೆ ಟೀಂ ಇಂಡಿಯಾ ನಾಯಕರಾಗಿ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ. ಟಿ20 ಫಾರ್ಮ್ಯಾಟ್ ಗೆ ಹಾರ್ದಿಕ್ ನಾಯಕರಾಗಬಹುದು ಎಂಬ ಸುದ್ದಿ ಈ ಮೊದಲೇ ಹರಿದಾಡುತ್ತಿತ್ತು. ಅದೀಗ ನಿಜವಾಗುತ್ತಿದೆ. ಲಂಕಾ ಸರಣಿಗೆ ಹಾರ್ದಿಕ್ ನಾಯಕ ಎಂದು ಬಿಸಿಸಿಐ ಘೋಷಣೆ ಮಾಡಿದೆ.
ಈ ಮೂಲಕ ಮುಂಬರುವ ದಿನಗಳಲ್ಲಿ ಹಾರ್ದಿಕ್ ಟಿ20 ಫಾರ್ಮ್ಯಾಟ್ ಗೆ ಖಾಯಂ ನಾಯಕರಾಗಲಿದ್ದಾರೆ. ಆದರೆ ಏಕದಿನ ಮತ್ತು ಟೆಸ್ಟ್ ಮಾದರಿಗೆ ಮುಂದಿನ ಒಂದು ವರ್ಷ ರೋಹಿತ್ ಶರ್ಮಾ ಅವರೇ ಖಾಯಂ ನಾಯಕರಾಗಿರಲಿದ್ದಾರೆ. ಆದರೆ ಮುಂಬರುವ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಪಾಲ್ಗೊಳ್ಳುವುದು ಅನುಮಾನವಾಗಿದೆ.
ಹೀಗಾದಲ್ಲಿ ರೋಹಿತ್ ಬದಲು ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಬಹುದು ಎಂಬ ಸುದ್ದಿಯಿದೆ. ಇದಿನ್ನೂ ಖಚಿತವಾಗಿಲ್ಲ. ಜುಲೈ 27 ರಿಂದ 30 ರವರೆಗೆ ಟಿ20 ಸರಣಿ ಮತ್ತು ಆಗಸ್ಟ್ 2 ರಿಂದ 7 ರವರೆಗೆ ಏಕದಿನ ಸರಣಿ ನಡೆಯಲಿದೆ. ಇನ್ನು ಎರಡು ದಿನಗಳಲ್ಲಿ ಪೂರ್ಣಪ್ರಮಾಣದ ತಂಡ ಘೋಷಣೆಯಾಗುವ ಸಾಧ್ಯತೆಯಿದೆ.