ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್ ಗೆ ಬಿಸಿಸಿಐ ಕೋರಿಕೆ
ಬುಧವಾರ, 29 ನವೆಂಬರ್ 2023 (11:48 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆ ಅದೇ ಹುದ್ದೆಯಲ್ಲಿ ಮುಂದುವರಿಯಲು ಬಿಸಿಸಿಐ ಕೋರಿಕೊಂಡಿದೆ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ ಬಳಿಕ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯ ಅವಧಿ ಮುಕ್ತಾಯವಾಗಿದೆ. ಆದರೆ ಅವರು ಮುಂದುವರಿಯುತ್ತಾರಾ ಅಥವಾ ಹಿಂದೆ ಸರಿಯುತ್ತಾರಾ ಎಂಬ ಬಗ್ಗೆ ಕುತೂಹಲಗಳಿವೆ.
ಈ ನಡುವೆ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಿ ಮುಂದುವರಿಯಲು ನಿರಾಸಕ್ತಿ ತೋರಿದ್ದು, ಪ್ರಮುಖ ಐಪಿಎಲ್ ಫ್ರಾಂಚೈಸಿ ಜೊತೆಗೆ ಎರಡು ವರ್ಷಗಳಿಗೆ ಮೆಂಟರ್ ಆಗಿ ಕಾರ್ಯನಿರ್ವಹಿಸಲು ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಅದರ ನಡುವೆಯೇ ಈಗ ಸ್ವತಃ ಬಿಸಿಸಿಐ ದ.ಆಫ್ರಿಕಾ ಸರಣಿಯವರೆಗೆ ದ್ರಾವಿಡ್ ಗೆ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಆಫರ್ ನೀಡಿರುವುದಾಗಿ ವರದಿಯಾಗಿದೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ವಿವಿಎಸ್ ಲಕ್ಷ್ಮಣ್, ಆಶಿಷ್ ನೆಹ್ರಾ ಹೆಸರುಗಳೂ ಕೇಳಿಬಂದಿತ್ತು. ನೆಹ್ರಾ ಈಗಾಗಲೇ ಗುಜರಾತ್ ತಂಡದ ಕೋಚ್ ಆಗಿದ್ದು, ಅವರು ಟೀಂ ಇಂಡಿಯಾ ಕೋಚ್ ಹುದ್ದೆಗೇರಲು ಆಸಕ್ತಿ ಹೊಂದಿಲ್ಲ. ಅತ್ತ ಲಕ್ಷ್ಮಣ್ ಸದ್ಯಕ್ಕೆ ಎನ್ ಸಿಎ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ದ್ರಾವಿಡ್ ರನ್ನೇ ಸದ್ಯದ ಮಟ್ಟಿಗೆ ಕೋಚ್ ಆಗಿ ಮುಂದುವರಿಸಿದರೆ ಲಕ್ಷ್ಮಣ್ ಎನ್ ಸಿಎ ಮುಖ್ಯಸ್ಥರಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಬಹುದು ಎಂಬುದು ಬಿಸಿಸಿಐ ಲೆಕ್ಕಾಚಾರ.