ಮುಂಬೈ: ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರ ವಾರ್ಷಿಕ ಸಂಭಾವನೆ ಗುತ್ತಿಗೆಯ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಹೊರಟಿದ್ದು, ಕೆಲವು ಆಟಗಾರರಿಗೆ ನಷ್ಟವಾಗುವ ಸಾಧ‍್ಯತೆಯಿದೆ.
ಸದ್ಯಕ್ಕೆ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ, ಇಶಾಂತ್ ಶರ್ಮಾ ಎ ದರ್ಜೆಯ ಗುತ್ತಿಗೆ ಪಡೆಯುತ್ತಿದ್ದಾರೆ. ಆದರೆ ಇವರೆಲ್ಲರ ಪ್ರದರ್ಶನ ಕಳೆದ ಕೆಲವು ಸರಣಿಗಳಿಂದ ಕಳಾಹೀನವಾಗಿದ್ದು, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಹೀಗಾಗಿ ಈ ಆಟಗಾರರಿಗೆ ಡಿಮೋಷನ್ ಸಿಗುವ ಸಾಧ‍್ಯತೆಯಿದ್ದು, ಬಿ ದರ್ಜೆಗೆ ಇಳಿಯಬಹುದು ಎನ್ನಲಾಗಿದೆ.
ಇನ್ನು, ತಂಡದಲ್ಲಿ ಸ್ಥಿರವಾಗಿ ಸ್ಥಾನ ಪಡೆಯುವ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಶ್ರಾದ್ಧೂಲ್ ಠಾಕೂರ್, ಅಕ್ಸರ್ ಪಟೇಲ್ ಮುಂತಾದ ಆಟಗಾರರು ಬಿ ದರ್ಜೆಗೆ ಬಡ್ತಿ ಪಡೆಯುವ ಸಾಧ‍್ಯತೆಯಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಎ ಪ್ಲಸ್ ದರ್ಜೆಯಲ್ಲಿರಲಿದ್ದಾರೆ. ಕೆಎಲ್ ರಾಹುಲ್, ರಿಷಬ್ ಪಂತ್, ರವಿಚಂದ್ರನ್ ಅಶ್ವಿನ್ ಎ ದರ್ಜೆಯಲ್ಲಿ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.