ಕರ್ವಾ ಚೌತ್ ಪ್ರಯುಕ್ತ ಕೋಟ್ಲಾ ಏಕದಿನ ಪಂದ್ಯ ಮುಂದಕ್ಕೆ

ಶುಕ್ರವಾರ, 9 ಸೆಪ್ಟಂಬರ್ 2016 (13:00 IST)
ಕರ್ವಾ ಚೌತ್ ಹಬ್ಬದ ಪ್ರಯುಕ್ತ ಅಕ್ಟೋಬರ್ 19ರಂದು ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೆಯ ಏಕದಿನ ಪಂದ್ಯವನ್ನು ಒಂದು ದಿನಕ್ಕೆ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ. 
ಡೆಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಉಪಾಧ್ಯಕ್ಷ ಸಿ.ಕೆ ಖನ್ನಾ ಈ ಬದಲಾವಣೆಯನ್ನು ಖಚಿತಪಡಿಸಿದ್ದು ನಮ್ಮ ವಿನಂತಿಗೆ ಬಿಸಿಸಿಐ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ.
 
ಕರ್ವಾ ಚೌತ್ ಹಬ್ಬ ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ಹಬ್ಬವಾಗಿರುವುದರಿಂದ ಆ ದಿನ ಪಂದ್ಯವನ್ನು ನಡೆಸುವುದು ಕಷ್ಟ. ಪಂದ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ಡಿಡಿಸಿಎ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಖೆ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿತ್ತು.
 
"ನಮ್ಮ ಮನವಿಯನ್ನು ಒಪ್ಪಿಕೊಂಡಿದ್ದಕ್ಕೆ ಬಿಸಿಸಿಐಗೆ ಕೃತಜ್ಞರಾಗಿದ್ದೇವೆ. ಬಿಸಿಸಿಐ ಕಛೇರಿಯಿಂದ ಒಪ್ಪಿಗೆಯ ಸ್ವೀಕೃತಿ ಪತ್ರ ಸ್ವೀಕರಿಸಿದ್ದೇವೆ", ಎಂದು ಖನ್ನಾ ತಿಳಿಸಿದ್ದಾರೆ.
 
ಈ ತಿಂಗಳ 22 ರಿಂದ ಭಾರತ ಪ್ರವಾಸ ಕೈಗೊಳ್ಳಲಿರುವ ಕಿವೀಸ್, ಮೂರು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ