ಮುಂದಿನ ತಿಂಗಳು ಜಿಂಬಾಬ್ವೆ ಪ್ರವಾಸದಲ್ಲಿ ಏಕ ದಿನ ಮತ್ತು ಟ್ವೆಂಟಿ 20 ಅಂತಾರಾಷ್ಟ್ರೀಯ ತಂಡಕ್ಕೆ ಎಂ.ಎಸ್. ಧೋನಿ ನಾಯಕತ್ವ ವಹಿಸಲಿದ್ದು, ಅದರಲ್ಲಿ ಐವರು ರಾಷ್ಟ್ರೀಯ ತಂಡಕ್ಕೆ ಆಡಿರದ ಹೊಸಬರಿದ್ದಾರೆ ಮತ್ತು ರಾಷ್ಟ್ರೀಯ ತಂಡಕ್ಕೆ ಆಡುವ ಕಾಯಂ ಆಟಗಾರರ ಪೈಕಿ ಅನೇಕ ಮಂದಿ ಮಿಸ್ ಆಗಲಿದ್ದಾರೆ.
ಈ ವರ್ಷ ಆಡಿದ 16 ಟಿ 20ಗಳು ಮತ್ತು ಐದು ಏಕದಿನ ಪಂದ್ಯಗಳು ಪ್ಲಸ್ ಪ್ರಸಕ್ತ ಐಪಿಎಲ್ ಮತ್ತು ಈ ಸೀಸನ್‌ನಲ್ಲಿ ಸಾಲುಸಾಲಾಗಿ ಬರಲಿರುವ 17 ಟೆಸ್ಟ್ ಪಂದ್ಯಗಳ ಪ್ರಮಾಣವನ್ನು ಗಮನಿಸಿದ ಬಿಸಿಸಿಐ ಆಯ್ಕೆದಾರರು ಜಿಂಬಾಬ್ವೆ ಪ್ರವಾಸದಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮಾ, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ ಮತ್ತು ಉಮೇಶ್ ಯಾದವ್ ಅವರಿಗೆ ವಿರಾಮ ನೀಡಿದ್ದಾರೆ.
ಜಿಂಬಾಬ್ವೆ ಪ್ರವಾಸಕ್ಕೆ ಅವರ ಬದಲಿಗೆ ಆಯ್ಕೆಯಾದವರಲ್ಲಿ ಹರ್ಯಾಣ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ಆಫ್‌ಸ್ಪಿನ್ನಿಂಗ್ ಆಲ್‌ರೌಂಡರ್ ಜಯಂತ್ ಯಾದವ್, ವಿದರ್ಭ ಬ್ಯಾಟ್ಸ್‌ಮನ್ ಫೈಜ್ ಫಜಲ್, ಪಂಜಾಬ್ ಬ್ಯಾಟ್ಸ್‌ಮನ್ ಮಂದೀಪ್ ಸಿಂಗ್ ಮತ್ತು ಕರ್ನಾಟಕದ ಕರುಣ್ ನಾಯರ್ ಸೇರಿದ್ದಾರೆ.