ಚೆಪಾಕ್ ಚಿಪ್ಪಿನೊಳಗೆ ಹುದುಗಿದೆ ರನ್ ಮಳೆ

ಶುಕ್ರವಾರ, 16 ಡಿಸೆಂಬರ್ 2016 (16:51 IST)
ಚೆನ್ನೈ: ಎಂ.ಎ. ಚಿದಂಬರಂ ಸ್ಟೇಡಿಯಂ ಭಾರತ ಮತ್ತು ಇಂಗ್ಲೆಂಡ್ ನಡುವಿನ ಹಲವು ಪಂದ್ಯಗಳಿಗೆ ಸಾಕ್ಷಿಯಾಗಿದೆ. ಉಭಯ ತಂಡಗಳೂ ಇಲ್ಲಿ ಹಲವು ದಾಖಲೆಗಳನ್ನು ಮಾಡಿವೆ. ಅತೀ ಹೆಚ್ಚು ಟೋಟಲ್ ಮಾಡಿದ ತಂಡಗಳ ಪಟ್ಟಿಯಲ್ಲಿ ಇವೆರಡು ತಂಡಗಳಿಗೆ ಮೊದಲೆರಡು ಸ್ಥಾನಗಳಿವೆ.

ವೀರೇಂದ್ರ ಸೆಹ್ವಾಗ್ ರ ತ್ರಿಶತಕ, 2003 ರಲ್ಲಿ ಸಚಿನ್ ತೆಂಡುಲ್ಕರ್ 41 ನೇ ಶತಕ ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಚೇಸಿಂಗ್ ಮಾಡಿ ಟೆಸ್ಟ್ ಗೆದ್ದ ದಾಖಲೆಯೂ ಇಲ್ಲಿದೆ. ನಾಲ್ಕನೇ ದಿನವೂ ಬ್ಯಾಟಿಂಗ್ ಗೆ ಸಹಕರಿಸುವ ಪಿಚ್ ಚೆನ್ನೈಯದ್ದು. ಹೀಗಿರುವಾಗಿ ಇಂಗ್ಲೆಂಡ್ ಇಂದಿಲ್ಲಿ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ದಿನದಂತ್ಯಕ್ಕೆ ಕೇವಲ 4 ವಿಕೆಟ್ ಕಳೆದುಕೊಂಡು 284 ರನ್ ಗಳಿಸಿದ್ದು ವಿಶೇಷವೇನಲ್ಲ.

ಭಾರತೀಯ ಬೌಲರ್ ಗಳು ವಿಕೆಟ್ ಗಾಗಿ ಪರದಾಡಿದ್ದೂ ಹೊಸದೇನಲ್ಲ. ಇಲ್ಲಿನ ಸುಡು ಬಿಸಿಲಿಗೆ ಬೌಲರ್ ಗಳು ಬೆವರು ಹರಿಸುವುದು ಸಾಮಾನ್ಯವೇ. ಆದರೆ ಈ ಬಾರಿ ಒಂದೇ ಒಂದು ಚೇಂಜ್ ಎಂದರೆ, ಚೆನ್ನೈಯಲ್ಲಿ ಸುಡುಬಿಸಿಲು ಕೊಂಚ ಕಮ್ಮಿಯಿದ್ದೀತು ಅಷ್ಟೇ.

ಇಲ್ಲಿ ಯಾವುದೇ ತಂಡವಿರಲಿ. ಬ್ಯಾಟಿಂಗ್ ನೋಡುವುದೇ ಚೆಂದ. ಮಹೇಂದ್ರ ಸಿಂಗ್ ಧೋನಿ ಏಕಮಾತ್ರ ದ್ವಿಶತಕ ಹೊಡೆದಿದ್ದೂ ಇದೇ ಮೈದಾನದಲ್ಲಿ. ಈವತ್ತು ಅಂತಹದ್ದೇ ಸುಲಲಿತ ಬ್ಯಾಟಿಂಗ್ ಇಂಗ್ಲೆಂಡ್ ನ ಮೊಯಿನ್ ಅಲಿಯಿಂದ ಬಂತು. ಅವರು ಅಜೇಯರಾಗಿ 120 ರನ್ ಗಳಿಸಿ ಬೆನ್ ಸ್ಟೋಕ್ಸ್ ಜತೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇದ್ದವರಲ್ಲಿ ರವೀಂದ್ರ ಜಡೇಜಾ ಬೆಟರ್. ಅವರು ಸಾಕಷ್ಟು ವೇರಿಯೇಷನ್ ತಂದು ಮೂರು ವಿಕೆಟ್ ಕೀಳಲು ಸಫಲರಾದರು. ಆದರೆ ರವಿಚಂದ್ರನ್ ಅಶ್ವಿನ್ ಗೆ ಇಂದು ವಿಕೆಟ್ ಭಾಗ್ಯವಿರಲಿಲ್ಲ. ಮದುಮಗ ಇಶಾಂತ್ ಶರ್ಮಾ ಬೆಳಗಿನ ಅವಧಿಯಲ್ಲಿ ಚೆನ್ನಾಗಿ ಬೌಲ್ ಮಾಡಿದರು. ಆದರೆ ದಿನದಂತ್ಯಕ್ಕೆ ಹೊಸ ಚೆಂಡಿನಲ್ಲಿ ಅವರು ಅಷ್ಟೊಂದು ಪ್ರಭಾವಿಯಾಗಿರಲಿಲ್ಲ. ಜಯಂತ್ ಯಾದವ್ ಬದಲಿಗೆ ಕಣಕ್ಕಿಳಿದ ಅಮಿತ್ ಮಿಶ್ರಾ ಆಗಾಗ ಟವೆಲ್ ನಲ್ಲಿ ಬೆವರು ಒರೆಸಿಕೊಂಡಿದ್ದೇ ಬಂತು.

ಇಂಗ್ಲೆಂಡ್ ಪರ ಜೋ ರೂಟ್ ಮತ್ತೊಂದು ಅದ್ಭುತ ಆಟವಾಡಿ ಇನ್ನೇನು ಶತಕ ಗಳಿಸಬೇಕೆನ್ನುವಾಗ 88 ಕ್ಕೆ ಔಟಾದರು. ಅದೂ ಡಿಆರ್ ಎಸ್ ಮಹಿಮೆಯಿಂದ ಎನ್ನುವುದು ಭಾರತಕ್ಕೆ ಪ್ಲಸ್ ಪಾಯಿಂಟ್. ಅಂತೂ ಇಂದಿನ ದಿನ ಸಂಪೂರ್ಣವಾಗಿ ಇಂಗ್ಲೆಂಡ್ ಗೆ ಸಲ್ಲಬೇಕು. ನಾಳೆ ಪಿಚ್ ಕೊಂಚ ಬೌಲರ್ ಗಳಿಗೆ ಸಹಕರಿಸಿದರೆ ಭಾರತೀಯ ಸ್ಪಿನ್ ಜೋಡಿಗಳ ಮೋಡಿ ನಿರೀಕ್ಷಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ