ನವದೆಹಲಿ: ಐಪಿಎಲ್ ಫೈನಲ್ ಮತ್ತು ಧೋನಿಗೆ ಬಿಡಲಾರದ ನಂಟು ಇರಬೇಕು. ಅದಕ್ಕೇ ಇದುವರೆಗೆ ನಡೆದ 11 ಆವೃತ್ತಿಗಳ ಪೈಕಿ ಧೋನಿ 8 ಫೈನಲ್ ಗಳಲ್ಲಿ ಆಡಿದ್ದಾರೆ!
ಒಬ್ಬ ಆಟಗಾರನಿಗೆ ಇದು ದೊಡ್ಡ ದಾಖಲೆಯೇ ಸರಿ. ಅಂತೂ ಐಪಿಎಲ್ ಪ್ರಿಯರಿಗಂತೂ ಧೋನಿ ಇಲ್ಲದೇ ಐಪಿಎಲ್ ಫೈನಲ್ ಇಲ್ಲ ಎನ್ನುವಂತಹ ಸ್ಥಿತಿ. ಇಂದು ಈ ಆವೃತ್ತಿಯ ಐಪಿಎಲ್ ಫೈನಲ್ ನಡೆಯಲಿದ್ದು, ಮತ್ತೆ ಧೋನಿ ನೇತೃತ್ವದ ಸಿಎಸ್ ಕೆ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎದುರಾಗಲಿದೆ. ಕಳೆದ ಬಾರಿಯೂ ಧೋನಿ ಪುಣೆ ವಾರಿಯರ್ಸ್ ತಂಡದ ಪರ ಆಡಿ ಫೈನಲ್ ನಲ್ಲಿ ಆಡಿದ್ದರು.
ಸಿಎಸ್ ಕೆ ತಂಡಕ್ಕೂ ಇದು ದಾಖಲೆಯೇ. ಇದುವರೆಗಿನ 11 ಆವೃತ್ತಿಗಳಲ್ಲಿ ಸಿಎಸ್ ಕೆ 7 ಬಾರಿ ಫೈನಲ್ ತಲುಪಿದೆ. ಇದುವರೆಗೆ ಎರಡು ಐಪಿಎಲ್ ಪ್ರಶಸ್ತಿ ಚೆನ್ನೈ ಪಾಲಾಗಿದೆ. ಬಹುಶಃ ಧೋನಿ ಪಾಲಿಗೆ ಇದು ಕೊನೆಯ ಐಪಿಎಲ್. ಹಾಗಾಗಿ ತಂಡದ ಹಿರಿಯ ಆಟಗಾರ ಸುರೇಶ್ ರೈನಾ ಧೋನಿಗಾಗಿ ನಾವು ಈ ಐಪಿಎಲ್ ಗೆಲ್ಲಲಿದ್ದೇವೆ ಎಂದಿದ್ದಾರೆ.
ಅತ್ತ ಧೋನಿ ಕೂಡಾ ಗೆಲುವಿನೊಂದಿಗೆ ಐಪಿಎಲ್ ಗೆ ವಿದಾಯ ಹೇಳಲು ಬಯಸುತ್ತಿದ್ದಾರೆ. ಈ ಐಪಿಎಲ್ ಗೆ ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿ ಸಿಎಸ್ ಕೆ ತಂಡ ಮರಳಿತ್ತು. ಹೀಗಾಗಿ ಮ್ಯಾಚ್ ಫಿಕ್ಸಿಂಗ್ ಕಳಂಕ ತೊಡೆದು ಪ್ರಶಸ್ತಿ ಗೆಲ್ಲುವ ಮೂಲಕ ತಂಡದ ಅಭಿಮಾನಿಗಳಿಗೆ ಗಿಫ್ಟ್ ಕೊಡುವುದಾಗಿ ಧೋನಿ ಆರಂಭದಲ್ಲಿಯೇ ಭಾವನಾತ್ಮಕವಾಗಿ ಹೇಳಿಕೊಂಡಿದ್ದರು. ಸದ್ಯಕ್ಕೆ ಉಭಯ ತಂಡಗಳ ಬಲಾಬಲ ನೋಡಿದರೆ ಇದು ಅಸಾಧ್ಯವೇನೂ ಅಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.