ನವದೆಹಲಿ: ಈಚೆಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಸಾರಥ್ಯವನ್ನು ವಹಿಸಿಕೊಳ್ಳುವ ಜೊತೆಗೆ ರನ್ ಹೊಳೆ ಹರಿಸಿದ ಯುವರಾಜ ಶುಭಮನ್ ಗಿಲ್ ಅವರಿಗೆ ಹೊಸ ಜವಾಬ್ಧಾರಿ ನೀಡಲು ಬಿಸಿಸಿಐ ಸಿದ್ಧತೆ ನಡೆಸಿದೆ. .
ಮುಂದಿನ ತಿಂಗಳು ಆರಂಭವಾಗುವ ಏಷ್ಯಾ ಕಪ್ ಟಿ20 ಟೂರ್ನಿಗೆ 25 ವರ್ಷದ ಶುಭಮನ್ ಗಿಲ್ ಉಪ ನಾಯಕರಾಗುವ ಸಾಧ್ಯತೆ ದಟ್ಟವಾಗಿದೆ. ಗಿಲ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದು ದ್ವಿಶತಕ, ಮೂರು ಶತಕ ಬಾರಿಸುವ ಜೊತೆಗೆ ಹಲವು ದಾಖಲೆ ಬರೆದಿದ್ದರು. ಸರಣಿಯನ್ನು 2–2ರಿಂದ ಸಮಬಲ ಸಾಧಿಸಿ, ಅಮೋಘ ಸಾಧನೆ ಮೆರೆದಿದ್ದರು.
ಭಾರತ ಟಿ20 ತಂಡದ ಪೂರ್ಣಕಾಲಿಕ ನಾಯಕರಾಗಿ ಸೂರ್ಯಕುಮಾರ್ ಯಾದವ್ ಇದ್ದಾರೆ. ಉಪನಾಯಕ ಸ್ಥಾನಕ್ಕೆ ಗಿಲ್ ಆಯ್ಕೆಯಾಗುವ ಸಾಧ್ಯತೆಯಿದೆ. ಆದರೆ, ಆ ಸ್ಥಾನಕ್ಕೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಂದ ಪೈಪೋಟಿಯಿದೆ.
ಸೆ.9ರಂದು ಯುಎಇನಲ್ಲಿ ಟೂರ್ನಿ ಆರಂಭವಾಗಲಿದೆ. ವೇಗಿ ಜಸ್‌ಪ್ರೀತ್ ಬೂಮ್ರಾ ಟೂರ್ನಿಯಲ್ಲಿ ಆಡಲಿದ್ದು, ಅಕ್ಟೋಬರ್ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಸಂಜು ಸ್ಯಾಮ್ಸನ್ ಮೊದಲ ಕೀಪರ್ ಆಗುವುದು ಬಹುತೇಕ ಖಚಿತವಾದರೂ, ಎರಡನೇ ಕೀಪರ್ ಸ್ಥಾನಕ್ಕೆ ಜಿತೇಶ್ ಶರ್ಮಾ ಅಥವಾ ಧ್ರುವ ಜುರೇಲ್ ಆಯ್ಕೆಯಾಗುವ ಸಾಧ್ಯತೆಯಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಇದೇ 19 ಅಥವಾ 20 ರಂದು ಏಷ್ಯಾ ಕಪ್‌ಗೆ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆಯಿದೆ.