ಒಂದು ಬಾಲ್ ನಲ್ಲಿ ಜೀವದಾನ, ಮರುಕ್ಷಣವೇ ಐತಿಹಾಸಿಕ ಶಾಟ್: ಇದು ಧೋನಿ ಮ್ಯಾಜಿಕ್!

ಕೃಷ್ಣವೇಣಿ ಕೆ

ಶುಕ್ರವಾರ, 18 ಜನವರಿ 2019 (16:18 IST)
ಮೆಲ್ಬೋರ್ನ್: ಪಂದ್ಯ ಡೋಲಾಯಮಾನ ಸ್ಥಿತಿಯಲ್ಲಿದ್ದಾಗ ಒಮ್ಮೆ ಜೀವದಾನ ಪಡೆದ ಮೇಲೆ ಮರು ಬಾಲ್ ಎದುರಿಸುವಾಗ ಯಾರೇ ಆದರೂ ವಿಚಲಿತರಾಗುವುದು ಸಹಜ. ಆದರೆ ಧೋನಿ ತಾವೇಕೆ ಮಿಸ್ಟರ್ ಕೂಲ್ ಎಂಬುದನ್ನು ಆಸೀಸ್ ವಿರುದ್ಧ ತೃತೀಯ ಏಕದಿನ ಪಂದ್ಯದಲ್ಲಿ ನಿರೂಪಿಸಿಬಿಟ್ಟಿದ್ದಾರೆ.


ಆಸ್ಟ್ರೇಲಿಯಾದಂತೇ ಟೀಂ ಇಂಡಿಯಾ ಕೂಡಾ ತೀರಾ ನಿಧಾನಗತಿಯ ಚೇಸಿಂಗ್ ಮಾಡಿತ್ತು. ಕೇವಲ 230 ರನ್ ಗುರಿ ಬೆನ್ನಟ್ಟಲು ಟೀಂ ಇಂಡಿಯಾ ಅಂತಿಮ ಕ್ಷಣದವರೆಗೂ ಹೋರಾಡಿತು. ವಿಕೆಟ್ ಬಿದ್ದಿದ್ದು ಕೇವಲ 3. ಹಾಗಿದ್ದರೂ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದರು.

ವಿರಾಟ್ ಕೊಹ್ಲಿ 46 ರನ್ ಗಳಿಸಿ ಔಟಾದಾಗ ಧೋನಿ, ಕೇದಾರ್ ಜಾದವ್ ಜತೆಗೂಡಿ ಇನಿಂಗ್ಸ್ ಮುನ್ನಡೆಸಿದರು. ದ್ವಿತೀಯ ಏಕದಿನ ಪಂದ್ಯದಂತೆ ಮತ್ತೆ ಇಲ್ಲಿ ಧೋನಿ ಆಪತ್ಬಾಂಧವನಾದರು. ಸಂದರ್ಭಕ್ಕೆ ತಕ್ಕ ಇನಿಂಗ್ಸ್ ಕಟ್ಟಿದರು. ಒಟ್ಟು 114 ಎಸೆತ ಎದುರಿಸಿದ ಧೋನಿ 87 ರನ್ ಗಳಿಸಿದರು. ಅವರ ಜತೆಗೂಡಿದ ಕೇದಾರ್ ಜಾದವ್ 57 ಎಸೆತಗಳಲ್ಲಿ 61 ರನ್ ಗಳಿಸಿ ತಮ್ಮ ಆಯ್ಕೆ ಸಮರ್ಥಿಸಿಕೊಂಡರು.

ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಭಾರತದ ಇನಿಂಗ್ಸ್ ನ 48 ನೇ ಓವರ್. ಈ ಓವರ್ ನಲ್ಲಿ ಸ್ಟೋಯ್ನಿಸ್ ಬೌಲಿಂಗ್ ಮಾಡುತ್ತಿದ್ದರು. ಓವರ್ ನ ಮೊದಲ ಬಾಲ್ ನ್ನು ಮಿಡ್ ಆಫ್ ಕಡೆಗೆ ಹೊಡೆದಾಗ ಅದು ಕ್ಯಾಚ್ ಆಗುವ ಸಾಧ್ಯತೆಯಿತ್ತು. ಆದರೆ ಆಸೀಸ್ ನಾಯಕ ಫಿಂಚ್ ಕೈಗೆ ಬಂದಿದ್ದ ಕ್ಯಾಚ್ ಕೈ ಚೆಲ್ಲಿದರು. ಈ ನಡುವೆ ಧೋನಿ-ಕೇದಾರ್ ಜಾದವ್ ಬಿರುಸಾಗಿ ಓಡಿ ಎರಡನೇ ರನ್ ಕದಿಯುತ್ತಿದ್ದರು. ಆಗ ಜಾದವ್ ರನೌಟ್ ಆಗುವ ಚಾನ್ಸ್ ಇತ್ತು. ಕೂದಲೆಳೆಯಲ್ಲಿ ತಪ್ಪಿಸಿಕೊಂಡರು.

ಈ ಎಲ್ಲಾ ಡ್ರಾಮಾ ಆದಾಗ ಮರು ಓವರ್ ನಲ್ಲೇ ಧೋನಿ ಕೊಂಚ ರಿಲ್ಯಾಕ್ಸ್ ಆಗಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಧೋನಿ ಮರು ಎಸೆತವನ್ನು ಐತಿಹಾಸಿಕ ಶಾಟ್ ಹೊಡೆದು ಬೌಂಡರಿ ಗಳಿಸಿದರು. ಈ ಶಾಟ್ ಪಕ್ಕಾ ಅವರು 2011 ರ ವಿಶ್ವಕಪ್ ಫೈನಲ್ ನಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ್ ಎಸೆತದಲ್ಲಿ ಹೊಡೆದ ಶಾಟ್ ನಂತೆಯೇ ಇತ್ತು. ಇದನ್ನು ನೋಡಿ ಮೈದಾನದಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ಅಂತಿಮವಾಗಿ 49.2 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 234 ರನ್ ಗಳಿಸುವ ಮೂಲಕ ಭಾರತ 7 ವಿಕೆಟ್ ಗಳಿಂದ ಪಂದ್ಯ ಗೆದ್ದಿದ್ದಲ್ಲದೆ, ಸರಣಿಯನ್ನೂ ಕೈ ವಶ ಮಾಡಿಕೊಂಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ