ಐಪಿಎಲ್ ನಿಂದ ನಿವೃತ್ತಿ ನಂತರ ಧೋನಿ ಹೀಗೆ ಮಾಡ್ತಾರಂತೆ! ಕೇಳಿದ್ರೆ ಹೆಮ್ಮೆ ಪಡ್ತೀರಿ!

ಶನಿವಾರ, 23 ಡಿಸೆಂಬರ್ 2023 (08:40 IST)
ರಾಂಚಿ: ಟೀಂ ಇಂಡಿಯಾದಿಂದ ನಿವೃತ್ತರಾದರೂ ಧೋನಿ ಐಪಿಎಲ್ ನಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಈ ವರ್ಷವೂ ಅವರು ಐಪಿಎಲ್ ಆಡಲಿದ್ದಾರೆ.

42 ವರ್ಷದ ಧೋನಿಗೆ ಇದೇ ಕೊನೆಯ ಐಪಿಎಲ್ ಆಗಿರಬಹುದು ಎಂದು ಅನೇಕರು ಹೇಳುತ್ತಾರೆ. ಧೋನಿ ಕೂಡಾ ತಮ್ಮ ದೇಹ ಹೇಗೆ ಸ್ಪಂದಿಸುತ್ತದೋ ನೋಡಬೇಕು ಎನ್ನುತ್ತಿದ್ದಾರೆ.

ಹಾಗಿದ್ದರೆ ಐಪಿಎಲ್ ನಿಂದಲೂ ನಿವೃತ್ತರಾದ ಮೇಲೆ ಧೋನಿ ಏನು ಮಾಡ್ತಾರೆ? ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ತಮ್ಮ ಯೋಜನೆ ಬಹಿರಂಗಪಡಿಸಿದ್ದಾರೆ. ‘ಸದ್ಯಕ್ಕೆ ನಾನು ಐಪಿಎಲ್ ಆಡುತ್ತಿದ್ದೇನೆ. ಐಪಿಎಲ್ ನಿಂದಲೂ ನಿವೃತ್ತಿಯಾದ ಮೇಲೆ ನಾನು ಕೆಲವು ಸಮಯ ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕೆಂದಿದ್ದೇನೆ. ಕಳೆದ ಕೆಲವು ವರ್ಷಗಳಿಂದ ನನಗೆ ಸೇನೆಯೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ’ ಎಂದಿದ್ದಾರೆ.

ಧೋನಿ ಭಾರತೀಯ ಸೇನೆಯ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆಯಲ್ಲಿದ್ದಾರೆ. ಟೀಂ ಇಂಡಿಯಾ ಪರ ಕೊನೆಯ ಪಂದ್ಯವಾಡಿದ ಬಳಿಕ ಧೋನಿ 15 ದಿನಗಳ ಭಾರತೀಯ ಸೇನೆಯೊಂದಿಗೆ ತರಬೇತಿಯಲ್ಲೂ ಭಾಗಿಯಾಗಿದ್ದರು. ಭಾರತೀಯ ಸೇನೆಯ ಮೇಲೆ ಅವರಿಗೆ ಅಪಾರ ಗೌರವವಿದೆ. ಭಾರತದ ಪರ ಆಡುವಾಗ ತಮ್ಮ ಗ್ಲೌಸ್ ನಲ್ಲೂ ಭಾರತೀಯ ಸೇನೆಯ ಚಿಹ್ನೆ ಬಳಸುತ್ತಿದ್ದರು. ಹೀಗಾಗಿ ಈಗ ಐಪಿಎಲ್ ನಿಂದ ನಿವೃತ್ತರಾದ ಮೇಲೆ ಸೇನೆಯೊಂದಿಗೆ ಕಾಲ ಕಳೆಯುವ ಅವರ ಯೋಜನೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ