ಲಂಡನ್: ಅದು 2003 ರ ವಿಶ್ವಕಪ್ ಫೈನಲ್ ಪಂದ್ಯ. ಅಂದು ಗಂಗೂಲಿ ಮಾಡಿದ ಕೆಲವು ತಪ್ಪು ನಿರ್ಧಾರಗಳು ಭಾರತಕ್ಕೆ ದ್ವಿತೀಯ ಬಾರಿಗೆ ವಿಶ್ವಕಪ್ ಮುಡಿಗೇರಿಸುವ ಅವಕಾಶ ಕೈ ತಪ್ಪಿತು. ಅಂದು ಗಂಗೂಲಿ ಮಾಡಿದ ತಪ್ಪುಗಳನ್ನೇ ಇಂದು ಕೊಹ್ಲಿಯೂ ಮಾಡಿದರೇ?
ಅಂದು ಬ್ಯಾಟಿಂಗ್ ಪಿಚ್ ಆಗಿದ್ದರೂ, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ಬದಲು ಗಂಗೂಲಿ ತಮ್ಮ ಯುವ ಬೌಲಿಂಗ್ ಪಡೆಯನ್ನು ನಂಬಿಕೊಂಡು ಫೀಲ್ಡಿಂಗ್ ಮಾಡಿ ಕೈ ಸುಟ್ಟುಕೊಂಡರು. ನೋಡ ನೋಡುತ್ತಿದ್ದಂತೆ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ರನ್ ರಾಶಿ ಗುಡ್ಡೆ ಹಾಕಿದರು. 50 ಓವರ್ ಮುಗಿಸುವಷ್ಟರಲ್ಲಿ ಭಾರತದ ಬೌಲಿಂಗ್ ಪಡೆ ಸುಸ್ತು ಹೊಡೆದಿತ್ತು. ಮೊತ್ತ 350 ಆಗಿತ್ತು.
ಅಂದು ಅನುಭವಿ ಅನಿಲ್ ಕುಂಬ್ಳೆಯನ್ನು ಹೊರಗಿಟ್ಟು ಯುವ ಬೌಲರ್ ಗಳನ್ನೇ ಗಂಗೂಲಿ ನೆಚ್ಚಿಕೊಂಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಂದು ಭಾರತವನ್ನು ಕಾಪಾಡಬೇಕಿದ್ದ ಸಚಿನ್ ತೆಂಡುಲ್ಕರ್ 4 ರನ್ ಗೆ ವಿಕೆಟ್ ಒಪ್ಪಿಸಿದರು. ಅಂದು ಗಂಗೂಲಿ ಮಾಡಿದ್ದ ತಪ್ಪನ್ನೇ ಇಂದು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದರೇ?
ಕೊಹ್ಲಿ ಕೂಡಾ ಗಂಗೂಲಿಯಂತೆ ಮುಂಗೋಪಿ, ಒತ್ತಡ ಬಂದರೆ ತಡಬಡಾಯಿಸುತ್ತಾರೆ. ಇಂದು ಕೊಹ್ಲಿ ಕೂಡಾ ಟಾಸ್ ಗೆದ್ದಿದ್ದರು. ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅನುಭವಿ ಉಮೇಶ್ ಯಾದವ್ ರನ್ನು ಕೈ ಬಿಟ್ಟು ಕಳೆದ ಪಂದ್ಯದಲ್ಲಿ ಪರಿಣಾಮಕಾರಿಯಾಗಿರದ ಆರ್. ಅಶ್ವಿನ್ ರನ್ನು ಉಳಿಸಿಕೊಂಡರು.
ಅರೆ ಕಾಲಿಕ ಬೌಲರ್ ಗಳೂ ಕೈಕೊಟ್ಟರು. ಪಾಕ್ ಬ್ಯಾಟ್ಸ್ ಮನ್ ಗಳು ಯದ್ವಾ ತದ್ವಾ ರನ್ ಚಚ್ಚುತ್ತಿದ್ದರೆ, ಕೊಹ್ಲಿ ಗಲಿಬಿಲಿಗೊಂಡರು. ಪದೇ ಪದೇ ಅಸಮಾಧಾನ ಸೂಚಿಸುತ್ತಾ, ದಿಕ್ಕು ತೋಚದವರಂತೆ ಕೈ ಚೆಲ್ಲಿ ಕುಳಿತರು.
ಕೊನೆಯ ಐದು ಓವರ್ ಗಳನ್ನು ಬಿಟ್ಟರೆ ಭಾರತೀಯ ಬೌಲರ್ ಗಳ ಬೌಲಿಂಗ್ ಪೇಲವವಾಗಿತ್ತು. ಫೀಲ್ಡಿಂಗ್ ತೀರಾ ಕಳಪೆಯಾಗಿತ್ತು. ಒಂದೆರಡು ಬಾರಿ ರನೌಟ್ ಚಾನ್ಸ್ ಮಿಸ್ ಮಾಡಿಕೊಂಡರು. ಇದೆಲ್ಲದರ ಲಾಭ ಪಡೆದ ಪಾಕ್ 339 ರನ್ ಗಳ ಗುರಿ ನೀಡಿತು. ಆದರೆ ಭಾರತದಲ್ಲಿ ಚೇಸಿಂಗ್ ವೀರರೇ ಜಾಸ್ತಿ.
ಎಷ್ಟು ರನ್ ಮಾಡಿದರೂ ಚೇಸ್ ಮಾಡಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಗೆ ಆರಂಭದಲ್ಲೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಣ್ಣೀರೆರಚಿದರು. ಆರಂಭದಲ್ಲೇ ಇವರ ವಿಕೆಟ್ ಕಳೆದುಕೊಂಡಿರುವುದು ಭಾರತಕ್ಕೆ ದೊಡ್ಡ ಆಘಾತ. ಇಷ್ಟು ದೊಡ್ಡ ಮೊತ್ತ ಚೇಸ್ ಮಾಡಬೇಕಾದರೆ ಇವರಿಬ್ಬರ ಅಗತ್ಯ ಭಾರತಕ್ಕಿತ್ತು. ಆದರೆ ಬೇಕಾದ ಸಮಯದಲ್ಲೇ ನಿರಾಸೆ ಮಾಡಿಬಿಟ್ಟರು ಕೊಹ್ಲಿ!