ಟೀಂ ಇಂಡಿಯಾ ಗೆಲುವಿಗೆ ಕಾರಣವಾದ ಡಿಕೆ ಬಾಸ್!

ಸೋಮವಾರ, 19 ಮಾರ್ಚ್ 2018 (09:01 IST)
ಕೊಲೊಂಬೊ: ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಬಾಲ್ ನಲ್ಲಿ ರೋಚಕವಾಗಿ ಗೆದ್ದು ಸರಣಿ ತನ್ನದಾಗಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಡಿಕೆ ಬಾಸ್!
 

ಅಂದರೆ ದಿನೇಶ್ ಕಾರ್ತಿಕ್! ಅವರನ್ನು ಟೀಂ ಇಂಡಿಯಾ ಸದಸ್ಯರು ಪ್ರೀತಿಯಿಂದ ಕರೆಯುವ ಹೆಸರು ಡಿಕೆ. ಕಾರ್ತಿಕ್ ಕೊನೆಯಲ್ಲಿ ಬಂದು ಬಿರುಗಾಳಿಯಂತೆ ಅಬ್ಬರಿಸದೇ ಹೋಗಿದ್ದರೆ ಟೀಂ ಇಂಡಿಯಾ ಬಾಂಗ್ಲಾದಂತಹ ಕ್ರಿಕೆಟ್ ಶಿಶುಗಳ ಎದುರು ಸೋತು ಮುಖಭಂಗ ಅನುಭವಿಸಬೇಕಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. ಬಾಂಗ್ಲಾ  ಪರ ಶಬ್ಬೀರ್ ರೆಹಮಾನ್ 50 ಎಸೆತದಲ್ಲಿ 77 ರನ್ ಸಿಡಿಸಿದರು. ಟೀಂ ಇಂಡಿಯಾ ಪರ ಯಜುವೇಂದ್ರ ಚಾಹಲ್ 3, ಜಯದೇವ್ ಉನಾದ್ಕಟ್ 2 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಕಬಳಿಸಿದರು.

ಬ್ಯಾಟಿಂಗ್ ಆರಂಭಿಸಿದ ಭಾರತ ಇನ್ನೇನು ಉತ್ತಮ ಆರಂಭ ಪಡೆಯಿತು ಎನ್ನುವಷ್ಟರಲ್ಲಿ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಹಾಗಿದ್ದರೂ ರೋಹಿತ್ ಶರ್ಮಾ ಬಿರುಸಿನ 56 ರನ್ ಗಳಿಸಿದರು. ರೈನಾ ಬೇಗನೇ ಔಟಾದರೂ ಮನೀಶ್ ಪಾಂಡೆ (28), ಕೆಎಲ್ ರಾಹಲ್ ಬಿರುಸಿನ 24 ರನ್ ಗಳಿಸಿದರು. ಆದರೆ ಯುವ ಆಟಗಾರ ವಿಜಯ್ ಶಂಕರ್ 19 ಬಾಲ್ ಗಳಲ್ಲಿ 17 ರನ್ ಗಳಿಸಿ ಭಾರತಕ್ಕೆ ಸಂಕಟ ತಂದಿತ್ತರು. ಅಷ್ಟೇ ಅಲ್ಲ, ಗೆಲುವಿಗೆ ನಾಲ್ಕು ರನ್ ಬೇಕಾಗಿದ್ದಾಗ ಅಂತಿಮ ಘಟ್ಟದಲ್ಲಿ ವಿಕೆಟ್ ಕೈ ಚೆಲ್ಲಿ ವಿಲನ್ ಆದರು.

ಆದರೆ ಕ್ರೀಸ್ ನಲ್ಲಿ ದಿನೇಶ್ ಕಾರ್ತಿಕ್ ಗೆ ಅಂತಿಮ ಎಸೆತ ಎದುರಿಸುವ ಅವಕಾಶ ಸಿಕ್ಕಿದ್ದರಿಂದ ಭಾರತಕ್ಕೆ ಗೆಲುವು ಸಾಧ್ಯವಾಯಿತು. ಅಂತಿಮ ಎಸೆತದಲ್ಲಿ ಭಾರತಕ್ಕೆ 5 ರನ್ ಬೇಕಾಗಿತ್ತು. ಈ ಹಂತದಲ್ಲಿ ಟಿ20 ಪಂದ್ಯದ ರೋಚಕತೆ ಏನೆಂಬುದು ಅಕ್ಷರಶಃ ಅನುಭವಕ್ಕೆ ಬಂದಿತ್ತು. ಈ ಹಂತದಲ್ಲಿ ಕೂಲ್ ಆಗಿ ಸಿಕ್ಸರ್ ಬಾರಿಸಿದ ಡಿಕೆ ಗೆಲುವು ತಂದಿತ್ತರು. ತಕ್ಷಣ ಟೀಂ ಇಂಡಿಯಾ ಅವರನ್ನು ಸುತ್ತುವರೆದು ಬಿಗಿದಪ್ಪ ಸಂಭ್ರಮಿಸಿತು. ಅಂತಿಮವಾಗಿ ಕಾರ್ತಿಕ್ 8 ಬಾಲ್ ಗಳಲ್ಲಿ 3 ಸಿಕ್ಸರ್, 2 ಬೌಂಡರಿ ನೆರವಿನಿಂದ 29 ರನ್ ಗಳಿಸಿದರು. ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ಗುರು ಮುಟ್ಟಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ