ಯಾಸಿರ್ ಶಾಹ್ ಟೆಸ್ಟ್‌ನಲ್ಲಿ ಅಗ್ರ ಶ್ರೇಯಾಂಕದ ಬೌಲರ್

ಸೋಮವಾರ, 18 ಜುಲೈ 2016 (18:56 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಮನೋಜ್ಞ ಬೌಲಿಂಗ್ ಮಾಡಿದ ಫಲವಾಗಿ ಪಾಕಿಸ್ತಾನಿ ಸ್ಪಿನ್ನರ್ ಯಾಸಿರ್ ಶಾಹ್ ಸೋಮವಾರ ಟೆಸ್ಟ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಭುಜದ ಗಾಯದಿಂದ ಪಂದ್ಯದಲ್ಲಿ ಆಡಿರದ ಜೇಮ್ಸ್ ಆಂಡರ್‌ಸನ್ ಅವರನ್ನು ಹಿಂದಿಕ್ಕಿ ಯಾಸಿರ್ ಟೆಸ್ಟ್ ಶ್ರೇಯಾಂಕದ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದರು. 
 
ಯಾಸಿರ್ ಇಲ್ಲಿಯವರೆಗೆ 13 ಟೆಸ್ಟ್‌ಗಳಲ್ಲಿ 86 ವಿಕೆಟ್ ಕಬಳಿಸಿದ್ದು, ಅತೀ ವೇಗದಲ್ಲಿ 100 ಟೆಸ್ಟ್ ವಿಕೆಟ್ ಕಬಳಿಸಿದ ಬೌಲರ್‌‌ನ 120 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯುವ ಗುರಿ ಹೊಂದಿದ್ದಾರೆ. ಮಾಜಿ ಇಂಗ್ಲಿಷ್ ವೇಗಿ ಜಾರ್ಜ್ ಲೊಹಮಾನ್ 1896ರಲ್ಲಿ  ಪ್ರಸಕ್ತ ಈ ದಾಖಲೆ ನಿರ್ಮಿಸಿದ್ದು, 16 ಟೆಸ್ಟ್‌ಗಳಲ್ಲಿ 100 ವಿಕೆಟ್‌‍ಗಳನ್ನು ಕಬಳಿಸಿದ್ದರು. 
 
ಸರಣಿಗೆ ಮುನ್ನ ಯಾಸಿರ್ ನಾಲ್ಕನೇ ಸ್ಥಾನದಲ್ಲಿದ್ದು, ಕುಕ್ ಬಳಗದ ವಿರುದ್ಧ ಭರ್ಜರಿ 10 ವಿಕೆಟ್ ಕಬಳಿಕೆಯಿಂದ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದರು. ಯಾಸಿರ್ ಮೊದಲ ಇನ್ನಿಂಗ್ಸ್‌ನಲ್ಲಿ 72ಕ್ಕೆ 6 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 69ಕ್ಕೆ 4 ವಿಕೆಟ್ ಕೀಳುವ ಮೂಲಕ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಒಂದು ಟೆಸ್ಟ್‌ನಲ್ಲಿ 10 ವಿಕೆಟ್ ಕಿತ್ತ ಪ್ರಥಮ ಲೆಗ್ಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗ್ಯಾರಿ ಬಾಲನ್ಸ್‌ಗೆ ಆಫ್ ಸ್ಟಂಪ್‌ನಾಚೆ ಎಸೆದ ಅವರ ಎಸೆತವೊಂದು ಲೆಗ್ ಸ್ಟಂಪ್‌ಗೆ ತಾಗಿ ಔಟ್ ಆಗಿದ್ದು ಗಮನಸೆಳೆದಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ