ಬಿಸಿಸಿಐ ಆಡಳಿತ ಚುಕ್ಕಾಣಿ ಮಾಜಿ ನಾಯಕ ಸೌರವ್ ಗಂಗೂಲಿಗೆ?!

ಮಂಗಳವಾರ, 3 ಜನವರಿ 2017 (09:54 IST)
ನವದೆಹಲಿ: ಬಿಸಿಸಿಐನಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಶ್ರೀಮಂತ ಕ್ರಿಕೆಟ್ ಸಂಸ್ಥೆಯನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಪದಚ್ಯುತ್ ಅಧ್ಯಕ್ಷ ಅನುರಾಗ್ ಠಾಕೂರ್  ಬದಲಿಗೆ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.


ಬಿಸಿಸಿಐನ ಮಧ್ಯಂತರ ಸಮಿತಿ ನೇಮಿಸಲು, ಫಾಲಿ ನಾರಿಮನ್ ಮತ್ತು ಗೋಪಾಲ್ ಸುಬ್ರಮ್ಹಣ್ಯನ್ ಅವರಿಗೆ ಅಧಿಕಾರ ನೀಡಲಾಗಿದೆ. ಅಲ್ಲಿಯವರೆಗೆ ಬಿಸಿಸಿಐನ ಹಿರಿಯ ಉಪಾಧ್ಯಕ್ಷರುಗಳೇ ಕ್ರಿಕೆಟ್ ಸಂಸ್ಥೆಯನ್ನು ಮುಂದುವರಿಸಲಿದ್ದಾರೆ.

ಆದರೆ ಅನುರಾಗ್ ಠಾಕೂರ್ ರಿಂದ ತೆರವಾದ ಸ್ಥಾನಕ್ಕೆ ಬಿಸಿಸಿಐ ಉಪಾಧ್ಯಕ್ಷರುಗಳ ಪೈಕಿ ಎಲ್ಲರೂ, ವಯೋಮಿತಿ ದಾಟಿದವರಾದ್ದರಿಂದ ಅಧ್ಯಕ್ಷ ಸ್ಥಾನಕ್ಕೆ ಸದ್ಯ ತಾಂತ್ರಿಕ ಸಮಿತಿ ಮುಖ್ಯಸ್ಥರಾಗಿರುವ ಗಂಗೂಲಿ ಹೆಸರು ಬಲವಾಗಿ ಕೇಳಿಬರುತ್ತಿದೆ.

ಇನ್ನು ಕಾರ್ಯದರ್ಶಿ ಹುದ್ದೆಗೆ, ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ ನಲ್ಲಿರುವ, ಸದ್ಯಕ್ಕೆ ಬಿಸಿಸಿಐನ ಜಂಟಿ ಕಾರ್ಯದರ್ಶಿಯಾಗಿರುವ ಅಮಿತಾಭ್ ಚೌದರಿ ಹೆಸರು ಕೇಳಿಬರುತ್ತಿದೆ. ಒಂದು ವೇಳೆ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದರೆ, ಪ್ರಮುಖ ಕ್ರಿಕೆಟಿಗರೊಬ್ಬರು ಇದೇ ಮೊದಲ ಬಾರಿಗೆ ಅಧ್ಯಕ್ಷರಾದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ