ವಿರಾಟ್ ಕೊಹ್ಲಿ ಜೊತೆ ಸೆಲ್ಫೀ ತೆಗೆಯಲು ಮೈದಾನಕ್ಕೇ ನುಗ್ಗಿದ ಅಭಿಮಾನಿಗಳು

ಸೋಮವಾರ, 14 ಮಾರ್ಚ್ 2022 (08:40 IST)
ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವೆ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಗಳು ವಿರಾಟ್ ಕೊಹ್ಲಿ ಜೊತೆ ಸೆಲ್ಫೀ ತೆಗೆಯಲು ಮೈದಾನಕ್ಕೇ ನುಗ್ಗಿದ ಘಟನೆ ನಡೆದಿದೆ.

ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುವ ಕಾರಣಕ್ಕೆ ಕೊಹ್ಲಿಗೆ ಇಲ್ಲಿ ಅಭಿಮಾನಿಗಳು ಜಾಸ್ತಿ. ಹೀಗಾಗಿ ಮೊದಲ ದಿನದಿಂದಲೂ ಕೊಹ್ಲಿಗೆ ಪ್ರೇಕ್ಷಕರು ಜೈಕಾರ ಹಾಕುತ್ತಿದ್ದರೆ, ಅತ್ತ ಕೊಹ್ಲಿಯೂ ಅಭಿಮಾನಿಗಳೊಂದಿಗೆ ಸನ್ನೆಯಲ್ಲೇ ಸಂವಹನ ನಡೆಸುತ್ತಾ ಮನರಂಜನೆ ನೀಡುತ್ತಿದ್ದರು.

ನಿನ್ನೆಯ ದಿನದಾಟದಲ್ಲಂತೂ ಅಭಿಮಾನಿಗಳ ಗುಂಪು ನೇರವಾಗಿ ಮೈದಾನಕ್ಕೆ ನುಗ್ಗಿ ಕೊಹ್ಲಿ ಜೊತೆ ಸೆಲ್ಫೀ ಪಡೆಯಲು ಯತ್ನಿಸಿದೆ. ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕೊಹ್ಲಿ ಬಳಿ ತೆರಳಿ ಓರ್ವನಂತೂ ಸೆಲ್ಫೀ ಪಡೆದಿದ್ದಾನೆ. ಇನ್ನೊಬ್ಬ ಅಭಿಮಾನಿ ಮೈದಾನವಿಡೀ ಓಡಾಡಿ ಭದ್ರತಾ ಸಿಬ್ಬಂದಿಗಳಿಗೆ ತಲೆನೋವು ತಂದಿದ್ದ. ಕೊನೆಗೂ ಮೈದಾನಕ್ಕೆ ನುಗ್ಗಿದ್ದ ಎಲ್ಲರನ್ನೂ ಹೊರಗೆ ಕಳುಹಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ