ಎರಡು ವರ್ಷದ ಬಳಿಕ ತಂಡಕ್ಕೆ ಮರಳಿದ ಗಂಭೀರ್

ಬುಧವಾರ, 28 ಸೆಪ್ಟಂಬರ್ 2016 (07:06 IST)
ಸ್ನಾಯು ಸೆಳೆತಕ್ಕೆ ಒಳಗಾದ ಕೆ.ಎಲ್ ರಾಹುಲ್ ತಂಡದಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಹಿರಿಯ ಆಟಗಾರ ಗೌತಮ್ ಗಂಭೀರ್ ಎರಡು ವರ್ಷದ ಬಳಿಕ ತಂಡಕ್ಕೆ ಮರಳುವ ಅವಕಾಶ ಪಡೆದುಕೊಂಡಿದ್ದಾರೆ. 

34 ವರ್ಷದ ಗಂಭೀರ್ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. 
 
ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್‌ನಿಂದ ತಂಡದಿಂದ ಹೊರಗುಳಿದಿರುವ ಇಶಾಂತ್ ಶರ್ಮಾ 2 ನೇ ಪಂದ್ಯಕ್ಕೂ ಅಲಭ್ಯರಾಗಿದ್ದು ಅವರ ಬದಲು ಆಪ್ ಸ್ಪಿನ್ನರ್ ಜಯಂತ್ ಯಾದವ್ ಸ್ಥಾನ ಗಿಟ್ಟಿಸಿದ್ದಾರೆ. ಈ ಹಿಂದೆ ತಂಡಕ್ಕೆ ಆಯ್ಕೆಯಾಗಿದ್ದರೂ ಜಯಂತ್ ಇಲ್ಲಿಯರೆಗೂ ಮೈದಾನಕ್ಕೆ ಇಳಿದಿಲ್ಲ.
 
ಕಳೆದೆರಡು ವರ್ಷಗಳಿಂದ ವನವಾಸದಲ್ಲಿದ್ದ ಗೌತಿಗೆ ಐಪಿಎಲ್ ಮತ್ತು ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕಿವೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡದಿರುವುದು ಸಹಜವಾಗಿಯೇ ನಿರಾಶೆ ತರಿಸಿತ್ತು. ತೀವ್ರ ಬೇಸರಗೊಂಡಿದ್ದ ಗಂಭೀರ್, ನನಗೆ ನಿರಾಶೆಯಾಗಿದೆ ನಿಜ. ಹಾಗಂತ ನಾನು ಸೊಲೊಪ್ಪಿಕೊಳ್ಳೊದಿಲ್ಲ. ಅವಕಾಶಕ್ಕಾಗಿ ಮತ್ತೆ ಹೋರಾಡುತ್ತೇನೆ. ತಂಡಕ್ಕೆ ಮತ್ತೆ ಮರಳಿಯೇ ತೀರುತ್ತೇನೆ ಎಂದು ನೋವಿನಲ್ಲಿಯೂ ಆಶಾವಾದವನ್ನು ವ್ಯಕ್ತ ಪಡಿಸಿದ್ದರು. ಕೊನೆಗೂ ಅವರ ಪರಿಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ. 
 
ಮತ್ತೋರ್ವ ಹಿರಿಯ ಆಟಗಾರ ಯುವರಾಜ್ ಸಿಂಗ್ ಕೂಡ ಕಿವೀಸ್ ವಿರುದ್ಧದ ಏಕದಿನ ತಂಡಕ್ಕೆ ಮರಳುವ ಸಾಧ್ಯತೆ ಇದೆ.
 
ಗಂಭೀರ್ ಮತ್ತು ಯುವಿ ವಾಪಸಾತಿಗೆ ತಂಡದ ಕೋಚ್ ಅನಿಲ್ ಕುಂಬ್ಳೆ ಪಾತ್ರ ಮಹತ್ವದೆಂದು ಹೇಳಲಾಗುತ್ತಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ