IND vs ENG: ರಿಷಭ್ ಪಂತ್ ಶತಕ, ಲೀಡ್ಸ್ ನಲ್ಲಿ ಟೀಂ ಇಂಡಿಯಾದಿಂದ 2002 ರ ರಿಪೀಟ್ ಶೋ
ಇಂದು ಮೊದಲ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 359 ರನ್ ಗಳಿಂದ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಬಳಿಕ ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 413 ರನ್ ಗಳಿಸಿದ್ದು ಬೃಹತ್ ಮೊತ್ತದತ್ತ ಸಾಗಿದೆ. ನಿನ್ನೆ ಶತಕ ಗಳಿಸಿ ಅಜೇಯರಾಗುಳಿದಿದ್ದ ನಾಯಕ ಶುಬ್ಮನ್ ಗಿಲ್ ಇಂದು 144 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆದರೆ ಇಂದಿನ ಹೈಲೈಟ್ ರಿಷಭ್ ಪಂತ್. ನಿನ್ನೆ 65 ರನ್ ಗಳಿಸಿ ಅಜೇಯರಾಗುಳಿದಿದ್ದರು. ಇಂದು ತಮ್ಮ ಇನಿಂಗ್ಸ್ ಮತ್ತಷ್ಟು ವಿಸ್ತರಿಸಿದ ರಿಷಭ್ ಟೆಸ್ಟ್ ಕ್ರಿಕೆಟ್ ನ 7 ನೇ ಶತಕ ಸಿಡಿಸಿದರು. ಒಂದೇ ಕೈಯಿಂದ ಚೆಂಡನ್ನು ಅಟ್ಟಿ ಸಿಕ್ಸರ್ ಸಿಡಿಸುವ ಮೂಲಕ ಶತಕ ಪೂರ್ತಿ ಮಾಡಿದರು. ಇದರೊಂದಿಗೆ ಹೆಡಿಂಗ್ಲೆಯಲ್ಲಿ ಒಂದೇ ಇನಿಂಗ್ಸ್ ನಲ್ಲಿ ಭಾರತದ ಮೂರನೇ ಬ್ಯಾಟಿಗ ಶತಕ ಸಿಡಿಸಿದರು.
ಈ ಹಿಂದೆ 2002 ರಲ್ಲೂ ಇದೇ ಮೈದಾನದಲ್ಲಿ ಇಂತಹದ್ದೇ ಶೋ ನಡೆದಿತ್ತು. ಆಗ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡುಲ್ಕರ್ ಮೂವರೂ ಶತಕ ಸಿಡಿಸಿದ್ದರು. ಇದರೊಂದಿಗೆ ಭಾರತ ಗೆದ್ದಿತ್ತು. ಇದೀಗ ಮತ್ತೊಮ್ಮೆ ಮೂವರು ಬ್ಯಾಟಿಗರಿಂದ ಶತಕ ದಾಖಲಾಗಿರುವುದು ವಿಶೇಷ.