ಬಾಕ್ಸಿಂಗ್ ಗ್ರೇಟ್ ಮಹಮ್ಮದ್ ಅಲಿಗೆ ಗೌರವ ಸಲ್ಲಿಸಿದ ಸೋಬರ್ಸ್

ಶನಿವಾರ, 11 ಜೂನ್ 2016 (12:46 IST)
ಕ್ರಿಕೆಟ್‌ನ ಮಹಾನ್ ಆಲ್‌ರೌಂಡರ್ ಗಾರ್‌ಫೀಲ್ಡ್ ಸೋಬರ್ಸ್ ಶುಕ್ರವಾರ ಲಾರ್ಡ್ಸ್ ಮೈದಾನದಲ್ಲಿ ಬಾಕ್ಸಿಂಗ್ ದಂತಕತೆ ಮಹಮ್ಮದ್ ಅಲಿಗೆ ವಿಶೇಷ ನಮನ ಸಲ್ಲಿಸಿದರು. 1966ರಲ್ಲಿ ಇಬ್ಬರು ಕ್ರೀಡಾ ಐಕಾನ್‌ಗಳು ಲಾರ್ಡ್ಸ್‌ನಲ್ಲಿ ಭೇಟಿಯಾಗಿದ್ದರು. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಸೋಬರ್ ವೆಸ್ಟ್ ಇಂಡೀಸ್ ಆಟಗಾರರಾಗಿ ಅಲ್ಲಿಗೆ ಆಗಮಿಸಿದ್ದರು.

ಹೆವಿವೇಟ್ ಸ್ಟಾರ್ ಮಹಮ್ಮದ್ ಅಲಿ ಬ್ರಿಟನ್ ಹೆನ್ರಿ ಕೂಪರ್ ಜತೆ ಎರಡನೇ ಸೆಣಸಾಟಕ್ಕಾಗಿ ಲಂಡನ್‌ನಲ್ಲಿದ್ದರು. ಶುಕ್ರವಾರ ಇಂಗ್ಲೆಂಡ್ ಮತ್ತು ಶ್ರೀಲಂಕಾದ ಎರಡನೇ ದಿನದಾಟದ ಲಂಚ್ ವಿರಾಮದಲ್ಲಿ  ಮೈದಾನದ ಬೃಹತ್ ಪರದೆಯ ಮೇಲೆ ಅಲಿ ಸೋಬರ್ಸ್ ಅವರನ್ನು ಲಾರ್ಡ್ಸ್ ಡ್ರೆಸ್ಸಿಂಗ್ ರೂಂನಲ್ಲಿ ಭೇಟಿ ಮಾಡುತ್ತಿರುವ ಕಪ್ಪು ಬಿಳುಪು ಚಿತ್ರಗಳನ್ನು ಪ್ರದರ್ಶಿಸಲಾಯಿತು. 79 ವರ್ಷ ವಯಸ್ಸಾಗಿರುವ ಸೋಬರ್ಸ್ ಅಲಿ ಗೌರವಾರ್ಥ ಎರಡನೇ ಸೆಷನ್ ಆಟದ ಆರಂಭಕ್ಕೆ 5 ನಿಮಿಷಗಳಿಗೆ ಮುನ್ನ ಲಾರ್ಡ್ಸ್ ಪೆವಿಲಿಯನ್‌ನಲ್ಲಿ ಗಂಟೆಯೊಂದನ್ನು ಬಾರಿಸಿದರು.
 
 ಅಲಿ 1966ರಲ್ಲಿ  6ನೇ ಸುತ್ತಿನಲ್ಲಿ ಕೂಪರ್ ವಿರುದ್ಧ ಜಯಗಳಿಸಿ ವಿಶ್ವ ಹೆವಿವೇಟ್ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದರು. ಸೋಬರ್ಸ್ (163 ನಾಟೌಟ್) ಮತ್ತು ಅವರ ಸೋದರ ಸಂಬಂಧಿ ಡೇವಿಡ್ ಹಾಲ್‌ಪೋರ್ಡ್(105) ಎರಡನೇ ಇನ್ನಿಂಗ್ಸ್‌ನಲ್ಲಿ 274 ಜತೆಯಾಟವಾಡಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿನಿಂದ ಬಚಾವ್ ಮಾಡಿದ್ದರು.

ಮೂರು ಬಾರಿ ವಿಶ್ವ ಚಾಂಪಿಯನ್ ಅಲಿಯನ್ನು ಬಾಕ್ಸಿಂಗ್‌ನ ಸರ್ವಕಾಲಿಕ ಹೆವಿವೇಟ್ ಶ್ರೇಷ್ಟ ಬಾಕ್ಸರ್ ಎಂದು ಪರಿಗಣಿಸಲಾಗಿದ್ದರೆ, ಸೋಬರ್ಸ್ ಅವರನ್ನು ಸರ್ವಕಾಲಿಕ ಕ್ರಿಕೆಟ್ ಶ್ರೇಷ್ಟ ಆಲ್‌ರೌಂಡರ್ ಎಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ