ಆರ್‌ಸಿಬಿಗೆ ಆನೆಬಲ ತಂದ ಗ್ಯಾರಿ ಮತ್ತು ನೆಹ್ರಾ

ramkrishna puranik

ಗುರುವಾರ, 4 ಜನವರಿ 2018 (16:43 IST)
ಭಾರತ ತಂಡದ ಮಾಜಿ ಕೋಚ್ ಹಾಗೂ 2011 ರ ವಿಶ್ವಕಪ್ ಗೆಲ್ಲುವುದಕ್ಕಾಗಿ ಭಾರತ ತಂಡಕ್ಕೆ ತರಬೇತಿ ನೀಡಿದ್ದ ಗ್ಯಾರಿ ಕರ್ಸ್ಟನ್ ಮತ್ತು ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಆಶಿಶ್ ನೆಹ್ರಾ ಇಬ್ಬರೂ ಆರ್‌ಸಿಬಿ ತಂಡಕ್ಕೆ ಕೋಚಿಂಗ್ ಪಾಳೆಯದಲ್ಲಿ ಸೇರಿಕೊಂಡಿದ್ದಾರೆ.
ವಿಶ್ವ ಶ್ರೀಮಂತ ಟಿ20 ಕ್ರಿಕೆಟ್ ಪಂದ್ಯಾವಳಿಯಾದ ಐಪಿಎಲ್ 2018 ರ ಆವೃತ್ತಿಯಲ್ಲಿ ಗ್ಯಾರಿ ಕರ್ಸ್ಟನ್ ಮತ್ತು ಆಶಿಶ್ ನೆಹ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚಿಂಗ್ ತಂಡವನ್ನು ಸೇರ್ಪಡೆಗೊಂಡಿದ್ದಾರೆ. ತಂಡದ ಬ್ಯಾಟಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ಜವಾಬ್ದಾರಿ ಕರ್ಸ್ಟನ್ ಮೇಲಿದ್ದರೆ, ನೆಹ್ರಾ ಬೌಲಿಂಗ್ ಕೋಚ್ ಆಗಿ ನೆರವಾಗಲಿದ್ದಾರೆ. ಇದರೊಂದಿಗೆ 2014 ರಿಂದ ಇಲ್ಲಿಯವರೆಗೆ ತಂಡದ ಮುಖ್ಯ ಕೋಚ್ ಆಗಿದ್ದ ನ್ಯೂಜಿಲೆಂಡ್‌ನ ಮಾಜಿ ಸ್ಪಿನ್ ಬೌಲಿಂಗ್ ಮಾಂತ್ರಿಕ ಡೇನಿಯಲ್ ವೆಟ್ಟೋರಿ ಅವರು ಮುಖ್ಯ ಕೋಚ್ ಆಗಿಯೇ ಮುಂದುವರಿಯಲಿದ್ದಾರೆ.
 
ಐಪಿಎಲ್ 11 ನೇಯ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಈ ಮೂವರು ತಂಡದ ಕೋಚಿಂಗ್ ಪಾಳೆಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗ್ಯಾರಿ ಕರ್ಸ್ಟನ್ ಈ ಮೊದಲು 2015 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಕೋಚ್ ಆಗಿದ್ದರು. ಅವರು ಕಳೆದ ವಾರ ಆರ್‌ಸಿಬಿ ಜೊತೆಗೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
 
ಭಾರತ ತಂಡ 2011 ರ ವಿಶ್ವಕಪ್ ಗೆಲ್ಲಲು ಕೋಚ್ ಆಗಿ ಗ್ಯಾರಿ ಕರ್ಸ್ಟನ್ ಅವರ ಕೊಡುಗೆಯನ್ನು ಇಲ್ಲಿ ನೆನೆಯಬಹುದು. ಐಪಿಎಲ್‌ನಲ್ಲಿ ಚೋಕರ್ಸ್ ಪಟ್ಟವನ್ನು ಪಡುಕೊಂಡಿರುವ ಆರ್‌ಸಿಬಿ, ಈ ಪಟ್ಟದಿಂದ ಮುಕ್ತಿ ಹೊಂದಲು ಈ ಮೂವರ ಜೋಡಿ ಮೋಡಿ ಮಾಡುವುದಾ ಎಂದು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ