ಹೊಸ ಇನ್ನಿಂಗ್ಸ್‌ ಶುರು ಮಾಡಿದ ಕ್ರಿಕೆಟ್‌ ದೇವರು: ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್‌ನತ್ತ ಸಚಿನ್‌

Sampriya

ಭಾನುವಾರ, 6 ಅಕ್ಟೋಬರ್ 2024 (14:36 IST)
Photo Courtesy X
ವಾಷಿಂಗ್ಟನ್: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್ (ಎನ್‌ಸಿಎಲ್‌) ಮಾಲೀಕರ ಗುಂಪಿಗೆ ಸೇರಿದ್ದಾರೆ.

ಸಚಿನ್ ತೆಂಡೂಲ್ಕರ್ ಈ ಬಗ್ಗೆ ಪ್ರತಿಕ್ರಿಯಿಸಿ, ಕ್ರಿಕೆಟ್ ನನ್ನ ಜೀವನದ ಅತಿದೊಡ್ಡ ಪ್ರಯಾಣವಾಗಿದೆ. ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಈ ಉತ್ತೇಜಕ ಸಮಯದಲ್ಲಿ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಲು ಅತ್ಯಂತ ಸಂತಸಗೊಂಡಿದ್ದೇನೆ ಎಂದಿದ್ದಾರೆ.

ನಮ್ಮ ಮೂಲಕ ಹೊಸ ಪೀಳಿಗೆಯ ಅಭಿಮಾನಿಗಳನ್ನು ಪ್ರೇರೇಪಿಸುವ ಮೂಲಕ ವಿಶ್ವ ದರ್ಜೆಯ ಕ್ರಿಕೆಟ್‌ಗೆ ವೇದಿಕೆ ಸೃಷ್ಟಿಸುವುದು ಎನ್‌ಸಿಎಲ್‌ನ ಉದ್ದೇಶವಾಗಿದೆ. ಈ ಹೊಸ ಉಪಕ್ರಮದ ಭಾಗವಾಗಲು ಮತ್ತು ಅಮೆರಿಕದಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಖುದ್ದು ಸಾಕ್ಷಿಯಾಗಲು ನಾನು ಎದುರು ನೋಡುತ್ತಿದ್ದೇನೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಕ್ರಿಕಟ್‌ ದಂತಕತೆಗಳಾದ ಸುನಿಲ್ ಗವಾಸ್ಕರ್, ಜಹೀರ್ ಅಬ್ಬಾಸ್, ವಾಸಿಂ ಅಕ್ರಮ್, ದಿಲೀಪ್ ವೆಂಗ್‌ಸರ್ಕರ್, ಸರ್ ವಿವಿಯನ್ ರಿಚರ್ಡ್ಸ್, ವೆಂಕಟೇಶ್ ಪ್ರಸಾದ್, ಸನತ್ ಜಯಸೂರ್ಯ, ಮೊಯಿನ್ ಖಾನ್ ಮತ್ತು ಬ್ಲೇರ್ ಫ್ರಾಂಕ್ಲಿನ್ ಅವರಂತಹ ಕ್ರಿಕೆಟ್ ದಂತಕಥೆಗಳನ್ನು ಎನ್‌ಸಿಎಲ್‌ ಒಟ್ಟುಗೂಡಿಸುತ್ತದೆ.

ಶಾಹಿದ್ ಅಫ್ರಿದಿ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ರಾಬಿನ್ ಉತ್ತಪ್ಪ, ತಬ್ರೈಜ್ ಶಾಮ್ಸಿ, ಕ್ರಿಸ್ ಲಿನ್, ಏಂಜಲೊ ಮ್ಯಾಥ್ಯೂಸ್, ಕಾಲಿನ್ ಮುನ್ರೊ, ಸ್ಯಾಮ್ ಬಿಲ್ಲಿಂಗ್ಸ್, ಮೊಹಮ್ಮದ್ ನಬಿ ಮತ್ತು ಜಾನ್ಸನ್ ಚಾರ್ಲ್ಸ್ ಸೇರಿದಂತೆ ವಿಶ್ವದಾದ್ಯಂತದ ಖ್ಯಾತ ಆಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ. .

ಸಚಿನ್ ತೆಂಡೂಲ್ಕರ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಲೀಗ್ ಕುಟುಂಬಕ್ಕೆ ಸ್ವಾಗತಿಸಲು ನಾವು ಅತ್ಯಂತ ಉತ್ಸುಕರಾಗಿದ್ದೇವೆ ಎಂದು ಎನ್‌ಸಿಎಲ್ ಅಧ್ಯಕ್ಷ ಅರುಣ್ ಅಗರವಾಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ