Women's T20 WC: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಲೇಬೇಕಾದ ಒತ್ತಡದಲ್ಲಿ ಭಾರತ

Krishnaveni K

ಭಾನುವಾರ, 6 ಅಕ್ಟೋಬರ್ 2024 (11:14 IST)
ದುಬೈ: ಮಹಿಳೆಯರ ಟಿ20 ವಿಶ್ವಕಪ್ ನಲ್ಲಿ ಭಾರತ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ.

ಭಾರತ ಇಂದು ಲೀಗ್ ಹಂತದ ಎರಡನೆಯ ಪಂದ್ಯವನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲುಂಡಿದ್ದ ಭಾರತ ಈಗ ಗೆಲುವಿನ ಒತ್ತಡದಲ್ಲಿದೆ. ಭಾರತಕ್ಕೆ ಇನ್ನು ಮೂರು ಪಂದ್ಯಗಳು ಬಾಕಿಯಿದ್ದು ನಾಕೌಟ್ ಹಂತಕ್ಕೇರಲು ಎಲ್ಲಾ ಪಂದ್ಯಗಳನ್ನೂ ಗೆಲ್ಲಬೇಕಿದೆ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ಭಾರತ ಕೊನೆಯ ಸ್ಥಾನದಲ್ಲಿದೆ.

ಕಳೆದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ಫೀಲ್ಡಿಂಗ್ ನಲ್ಲೂ ಕಳಪೆ ಪ್ರದರ್ಶನ ನೀಡಿತ್ತು. ಶಫಾಲಿ ವರ್ಮ, ಸ್ಮೃತಿ, ಹರ್ಮನ್ ಸೇರಿದಂತೆ ಅನುಭವಿ ಆಟಗಾರ್ತಿಯರು ಅನುಭವಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಈ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದರೂ ಮುಂದೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಜೊತೆಗೂ ಗೆಲ್ಲಬೇಕಾದ ಒತ್ತಡವಿದೆ. ಒಂದು ವೇಳೆ ಪಾಕಿಸ್ತಾನ ವಿರುದ್ಧವೂ ಸೋತರೆ ಉಳಿದ ಪಂದ್ಯಗಳು ಔಪಚಾರಿಕವಾಗಲಿದ್ದು, ಭಾರತ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದು ಅವಮಾನ ಅನುಭವಿಸಬೇಕಾಗುತ್ತದೆ. ಇಂದಿನ ಈ ಪಂದ್ಯ ಅಪರಾಹ್ನ 3.30 ಕ್ಕೆಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ