ಎಡ್ಜ್ ಬಾಸ್ಟನ್: ಗೆಲುವು ಬೇಕೆಂದರೆ ವಿರಾಟ್ ಕೊಹ್ಲಿ ಔಟಾಗಬೇಕು! ನಿನ್ನೆಯ ದಿನದಾಟ ಮುಗಿದಾಗ ಇಂಗ್ಲೆಂಡ್ ಆಟಗಾರರ ಮಂತ್ರ ಇದುವೇ ಆಗಿತ್ತು.
ಆದರೆ ಟೀಂ ಇಂಡಿಯಾ, ಅಭಿಮಾನಿಗಳು ವಿರಾಟ್ ಕೊಹ್ಲಿ ಕೊನೆಯವರೆಗೂ ಇರಲಿ ಎಂದು ಪ್ರಾರ್ಥಿಸುತ್ತಿದ್ದರು. ವಿರಾಟ್ ಕೊಹ್ಲಿಯ ಏಕಾಂಗಿ ಹೋರಾಟ ನೋಡಿ ಬಹುಶಃ ಮೈದಾನದಲ್ಲಿ ಇಂಗ್ಲೆಂಡ್ ಅಭಿಮಾನಿಗಳಿಗೂ ಈ ಅಪ್ರತಿಮ ಆಟಗಾರನ ಆಟ ನೋಡುವ ಮನಸ್ಸಾಗಿರಬಹುದು.
ಆದರೆ 47 ನೇ ಓವರ್ ನಲ್ಲಿ ಬೆನ್ ಸ್ಟೋಕ್ ಎಲ್ ಬಿಡಬ್ಲ್ಯು ಬಲೆಗೆ ಕೊಹ್ಲಿ ಬಿದ್ದಾಗ ಇಡೀ ಮೈದಾನವೇ ಸ್ತಬ್ಧವಾಯಿತು. ಟೀಂ ಇಂಡಿಯಾಕ್ಕೆ ಹೃದಯವೇ ಬಾಯಿಗೆ ಬಂದಂತಾಯಿತು. ಅಲ್ಲಿಗೆ ಟೀಂ ಇಂಡಿಯಾ ಸೋಲೂ ಖಾತರಿಯಾಗಿತ್ತು.
ವಿರಾಟ್ ಕೊಹ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ ಇಡೀ ಮೈದಾನವೇ ಎದ್ದು ನಿಂತು ಅಭಿನಂದನೆ ಸಲ್ಲಿಸಿತು. ಒಬ್ಬ ಚಾಂಪಿಯನ್ ಗೆ ಸಿಗಬೇಕಾದ ಗೌರವವೇನೋ ಕೊಹ್ಲಿಗೆ ಸಿಕ್ಕಿತು. ಆದರೆ ಟೀಂ ಇಂಡಿಯಾ ಗೆಲುವಿನ ಹೊಸ್ತಿಲವರೆಗೂ ಬಂದು 31 ರನ್ ಗಳಿಂದ ಸೋತಿತು.
ಕೊಹ್ಲಿ ಔಟಾದ ಬಳಿಕವೂ ಹಾರ್ದಿಕ್ ಪಾಂಡ್ಯ ಭರವಸೆಯ ಆಶಾಕಿರಣವಾಗಿ ಇದ್ದರೂ ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ತಕ್ಕ ಜತೆಯಾಟವಾಡಲು ಸಾಥಿಗಳೂ ಸಿಗಲಿಲ್ಲ. ಕೊನೆಯವರಾಗಿ ಪಾಂಡ್ಯ ಸಾಹಸವೂ ವ್ಯರ್ಥವಾಯಿತು. ಕೊನೆಯವರಾಗಿ ಔಟಾದ ಪಾಂಡ್ಯ 31 ರನ್ ಗಳಿಸಿದರು.
ಅತ್ತ ಇಂಗ್ಲೆಂಡ್ ಪರ ಬೆನ್ ಸ್ಟೋಕ್ ನಾಲ್ಕು ವಿಕೆಟ್ ಕಿತ್ತು ಹೀರೋ ಎನಿಸಿದರು. ಈ ಪಂದ್ಯದಲ್ಲಿ ಒಟ್ಟು ಐದು ವಿಕೆಟ್ ಮತ್ತು 63 ರನ್ ಗಳಿಸಿದ ಸ್ಯಾಮ್ ಕ್ಯುರೇನ್ ಮತ್ತೊಬ್ಬ ಸ್ಟಾರ್ ಆಟಗಾರರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.