ಟೀಂ ಇಂಡಿಯಾ ಹಳೆಯ ಹುಲಿಗಳ ದಾಳಿಗೆ ಸಿಲುಕಿದ ಇಂಗ್ಲೆಂಡ್

ಶುಕ್ರವಾರ, 3 ಆಗಸ್ಟ್ 2018 (17:42 IST)
ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ಮೂರನೇ ದಿನ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 86 ರನ್ ಗಳಿಸಿ ಸಂಕಷ್ಟಕ್ಕೀಡಾಗಿದೆ.

ಇದು ಟೀಂ ಇಂಡಿಯಾ ಹಿರಿಯ ಬೌಲರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ಕರಾಮತ್ತು. ಇಬ್ಬರೂ ತಲಾ ಮೂರು ವಿಕೆಟ್ ಕಿತ್ತು ಇಂಗ್ಲೆಂಡ್ ಗೆ ಭಾರೀ ಆಘಾತ ಉಂಟುಮಾಡಿದ್ದಾರೆ.

ಮೊದಲ ಇನಿಂಗ್ಸ್ ನ 13 ರನ್ ಗಳ ಮುನ್ನಡೆ ಸೇರಿ ಇಂಗ್ಲೆಂಡ್ ಒಟ್ಟು ಮುನ್ನಡೆ ಇದೀಗ 99 ರನ್ ತಲುಪಿದೆ. ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ ಮೊದಲ ಮೂರು ವಿಕೆಟ್ ಅಶ್ವಿನ್ ಪಾಲಾದರೆ, ಮತ್ತೆ ಮೂರು ವಿಕೆಟ್ ಇಶಾಂತ್ ಪಾಲಾಯಿತು. ಅದರಲ್ಲೂ ಅಲೆಸ್ಟರ್ ಕುಕ್ ಶೂನ್ಯ ಸಂಪಾದಿಸಿದರೆ ನಾಯಕ ಜೋ ರೂಟ್ ಕೇವಲ 14 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಪಿಚ್ ಬೌಲರ್ ಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು, ಇದು ಭಾರತೀಯ ಬ್ಯಾಟ್ಸ್ ಮನ್ ಗಳಿಗೂ ಅಪಾಯದ ಕರೆಗಂಟೆಯೇ ಸರಿ. ಎಚ್ಚರಿಕೆಯಿಂದ ಆಡದೇ ಇದ್ದರೆ ವಿಕೆಟ್ ತರಗಲೆಯಂತೆ ಉರುಳೋದು ಗ್ಯಾರಂಟಿ. ಹೀಗಾಗಿ ಮುಂದಿನ ಅವಧಿ ಟೀಂ ಇಂಡಿಯಾ ಪಾಲಿಗೆ ಮತ್ತಷ್ಟು ಮಹತ್ವದ್ದಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ